ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ 2025ರಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದ್ದ ಭಾರತ ತಂಡಕ್ಕೆ ಇನ್ನೂ ಟ್ರೋಫಿ ಸಿಕ್ಕಿಲ್ಲ. ಫೈನಲ್ ಮುಗಿದು ಹಲವು ತಿಂಗಳು ಕಳೆದರೂ ಪ್ರಶಸ್ತಿ ಹಸ್ತಾಂತರವಾಗದಿರುವುದು ಈಗ ಕ್ರಿಕೆಟ್ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಸೆಪ್ಟೆಂಬರ್‌ನಲ್ಲಿ ನಡೆದ ಫೈನಲ್ ಪಂದ್ಯದ ಬಳಿಕ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಭಾರತ ತಂಡ ನಿರಾಕರಿಸಿತ್ತು. ಆ ಘಟನೆ ಬಳಿಕ ಏಷ್ಯಾಕಪ್ ಟ್ರೋಫಿ ನಖ್ವಿ ಅವರ ವಶದಲ್ಲಿಯೇ ಇದೆ ಎನ್ನಲಾಗುತ್ತಿದೆ. ಆರಂಭದಲ್ಲಿ ಟ್ರೋಫಿಯನ್ನು ಎಸಿಸಿ ಪ್ರಧಾನ ಕಚೇರಿಯಲ್ಲಿ ಇರಿಸಲಾಗಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಆದರೆ ನಂತರ ನಖ್ವಿ ಅವರು ಅದನ್ನು ಖಾಸಗಿಯಾಗಿ ಇಟ್ಟುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದವು. ಇದುವರೆಗೂ ಟ್ರೋಫಿ ಇರುವ ನಿಖರ ಸ್ಥಳ ಮಾತ್ರ ಬಹಿರಂಗವಾಗಿಲ್ಲ.
ಇದನ್ನೂ ಓದಿ: FOOD | ಜಿಮ್ ಪ್ರಿಯರೂ ಈ ಸ್ನ್ಯಾಕ್ಸ್ ತಿನ್ನಬಹುದು, ಚಿಕನ್ ಪಕೋಡಾ ಹೀಗೆ ಮಾಡಿ
ಈ ವಿಚಾರವಾಗಿ ಇತ್ತೀಚೆಗೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಟಿವಿ ಕಾರ್ಯಕ್ರಮವೊಂದರಲ್ಲಿ ನಖ್ವಿ ಅವರನ್ನು ಪ್ರಶ್ನಿಸಲಾಯಿತು. ಪತ್ರಕರ್ತರು ಟ್ರೋಫಿ ಎಲ್ಲಿದೆ ಮತ್ತು ಅದನ್ನು ಭಾರತಕ್ಕೆ ಯಾವಾಗ ನೀಡಲಾಗುತ್ತದೆ ಎಂದು ಕೇಳಿದಾಗ ಅವರು ನೇರ ಉತ್ತರ ತಪ್ಪಿಸಿದರು. “ಟ್ರೋಫಿ ಎಲ್ಲಿದ್ದರೂ ಅದು ಸುರಕ್ಷಿತವಾಗಿದೆ” ಎಂಬ ಒಂದೇ ಸಾಲಿನ ಪ್ರತಿಕ್ರಿಯೆ ನೀಡಿದ ಅವರು, ಹಸ್ತಾಂತರದ ಬಗ್ಗೆ ಮೌನ ವಹಿಸಿದರು.
ಈ ಎಲ್ಲ ಬೆಳವಣಿಗೆಗಳ ನಡುವೆ, ಏಷ್ಯಾಕಪ್ ಟ್ರೋಫಿ ಭಾರತ ತಂಡದ ಕೈ ಸೇರುವ ದಿನ ಯಾವಾಗ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

