ಹೊಸದಿಗಂತ ವರದಿ,ನವದೆಹಲಿ:
ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಬೆಂಗಳೂರು ಸೇರಿದಂತೆ ವಿವಿಧೆಡೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿರುವುದು ಪ್ರಧಾನಿ ಮೋದಿ ಅವರ ದೂರದೃಷ್ಟಿಯ ನಾಯಕತ್ವಕ್ಕೆ ಸಿಕ್ಕ ಜನಾದೇಶ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದ್ದಾರೆ.
ಚುನಾವಣೆಗೆ ಬ್ಯಾಲೆಟ್ ಪೇಪರ್ ಆಗಲಿ ಅಥವಾ ಇವಿಎಂ ಬಳಕೆಯಾಗಲಿ ಫಲಿತಾಂಶ ಮಾತ್ರ ಒಂದೇ ಆಗಿರುತ್ತದೆ. ಜನಾದೇಶ ಬಿಜೆಪಿ ಪರವೇ ಇರುತ್ತದೆ ಎಂದು ಸಚಿವರು ಕಾಂಗ್ರೆಸ್ ಗೆ ತಿರುಗೇಟು ಕೊಟ್ಟಿದ್ದಾರೆ.
ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಚುನಾವಣೆ ನಡೆದ ಎಲ್ಲಾ 5 ಪಟ್ಟಣ ಪಂಚಾಯತಿಗಳು ಮತ್ತು 2 ವಾರ್ಡ್ ಉಪಚುನಾವಣೆಗಳಲ್ಲಿ ಅಧಿಕ ಅಂತರದಿಂದ ಗೆಲವು ಸಾಧಿಸಿದೆ. ಇದು ಜನರ ಮನಸ್ಥಿತಿಯನ್ನು ಪ್ರತಿಬಿಂಬಿಸಿದೆ ಎಂದು ಜೋಶಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ಗೆ ಭಾರಿ ಮುಖಭಂಗವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ, ಕಿನ್ನಿಗೋಳಿ ಪ.ಪಂ., ಉತ್ತರ ಕನ್ನಡದ ಮಂಕಿ ಪ.ಪಂ. ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಗಳಲ್ಲಿ ಬಿಜೆಪಿ ಬಹುಮತ ಪಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರಸಭೆ ಮತ್ತು ರಾಯಚೂರು ಜಿಲ್ಲೆ ತುರವಿಹಾಳ ಪ.ಪಂ.ಗಳ ಒಂದೊಂದು ವಾರ್ಡ್ ಉಪಚುನಾವಣೆಯಲ್ಲಿ ಸಹ ಬಿಜೆಪಿ ಗೆಲುವಿನ ನಗೆ ಬೀರಿರುವುದು ಜನರು ಬಿಜೆಪಿ ಆಡಳಿತದ ನಿರೀಕ್ಷಿಯಲ್ಲಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರಲ್ಹಾದ ಜೋಶಿ ಅಭಿಪ್ರಾಯಿಸಿದ್ದಾರೆ.

