ಭಾರತದ ಟಾಪ್ ಫುಡ್ ಬ್ರ್ಯಾಂಡ್‌ ಯಾವುದು? ನಮ್ಮ ಕರ್ನಾಟಕದ ಆಹಾರ ಉತ್ಪನ್ನ ಈ ಪಟ್ಟಿಯಲ್ಲಿ ಇದ್ಯಾ?

ಭಾರತೀಯ ಆಹಾರ ಉತ್ಪನ್ನಗಳ ಮೌಲ್ಯಮಾಪನ ಕುರಿತಂತೆ ಯುಕೆ ಮೂಲದ ಬ್ರ್ಯಾಂಡ್ ಫಿನಾನ್ಸ್ ಸಂಸ್ಥೆ ನಡೆಸಿದ ಸಮೀಕ್ಷೆಯ ಫಲಿತಾಂಶ ಬಹಿರಂಗವಾಗಿದೆ. ಈ ಅಧ್ಯಯನದ ಪ್ರಕಾರ, ದೇಶದಾದ್ಯಂತ ಜನಪ್ರಿಯತೆಯನ್ನು ಗಳಿಸಿದ ಅಮೂಲ್ ಬ್ರ್ಯಾಂಡ್, ಭಾರತದ ನಂ.1 ಫುಡ್ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರೊಂದಿಗೆ, ಕರ್ನಾಟಕದ ಹೆಮ್ಮೆಯ ಹಾಲು ಮತ್ತು ಹಾಲಿನ ಉತ್ಪನ್ನ ಬ್ರ್ಯಾಂಡ್ ನಂದಿನಿ, ಟಾಪ್ 5 ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ.

ಅಮೂಲ್ ಬ್ರ್ಯಾಂಡ್‌ ವ್ಯಾಲ್ಯೂ $4.1 ಬಿಲಿಯನ್ ಎಂದು ನಿಗದಿಯಾಗಿದ್ದು, ಇದು ಮಾರುಕಟ್ಟೆಯಲ್ಲಿ ಕಂಪನಿಯ ಪ್ರಭಾವ ಮತ್ತು ಗ್ರಾಹಕರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಈ ಪಟ್ಟಿಯಲ್ಲಿ ದೆಹಲಿ ಮೂಲದ ಮದರ್ ಡೈರಿ $1.15 ಬಿಲಿಯನ್ ಮೌಲ್ಯದಿಂದ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಬ್ರಿಟಾನಿಯಾ ಮೂರನೇ ಸ್ಥಾನದಲ್ಲಿದ್ದು, ನಂದಿನಿ ನಂತರ ಡಾಬುರ್ ಐದನೇ ಸ್ಥಾನದಲ್ಲಿದೆ.

2024 ರಲ್ಲಿ 3ನೇ ಸ್ಥಾನದಲ್ಲಿದ್ದ ಮದರ್ ಡೈರಿ, 2025 ರಲ್ಲಿ 35ನೇ ಸ್ಥಾನಕ್ಕೆ ಜಿಗಿದು ಭಾರತಾದ್ಯಂತ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಇತ್ತ, ಅಮೂಲ್ ಮಾತ್ರ ಭಾರತದ ಶತಕೋಟಿ ಮೌಲ್ಯದ 100 ಟಾಪ್ ಬ್ರ್ಯಾಂಡ್‌ಗಳ ಪೈಕಿ 17ನೇ ಸ್ಥಾನವನ್ನು ಹೊಂದಿದೆ.

ನಂದಿನಿಗೆ ಮಾರುಕಟ್ಟೆಯಲ್ಲಿ ಬಲಿಷ್ಠ ಸ್ಥಿತಿ
ಕರ್ನಾಟಕದ ನಂದಿನಿ ಬ್ರ್ಯಾಂಡ್, ರಾಜ್ಯದ ಒಳಗೂ ಮತ್ತು ಹೊರಗೂ ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಿದೆ. ಇತ್ತೀಚೆಗೆ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ ಮಳಿಗೆ ತೆರೆಯುವ ಬಗ್ಗೆ ಬಂದಿದ್ದ ವರದಿಗಳ ನಂತರ ರಾಜ್ಯದ ರಾಜಕೀಯ ಹಾಗೂ ವ್ಯಾಪಾರ ವಲಯದಲ್ಲಿ ಸಂಚಲನ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಬೆಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿಯಾಗಿ ನಂದಿನಿಗೆ ಮಳಿಗೆ ಅವಕಾಶ ಕಲ್ಪಿಸಲು ಮನವಿ ಸಲ್ಲಿಸಿದ್ದರು.

ಇನ್ನು ಮುಂದೆ ನಂದಿನಿಯ ವಿಸ್ತರಣೆ ಯಾವ ಹಾದಿಯಲ್ಲಿ ಸಾಗುತ್ತದೆ ಎಂಬುದು, ರಾಜ್ಯ ಸರ್ಕಾರದ ಹಾಗೂ ಬೇರೆ ವೇದಿಕೆಗಳ ತೀರ್ಮಾನಗಳ ಮೇಲೆ ಅವಲಂಬಿತವಾಗಿದೆ. ಆದರೂ ಕೂಡ, ಭಾರತೀಯ ಬ್ರ್ಯಾಂಡ್‌ಗಳ ಪೈಕಿ ನಂದಿನಿ ಸ್ಥಾನ ಪಡೆದಿರುವುದು ರಾಜ್ಯದ ಉತ್ಪನ್ನದ ವೈಭವವನ್ನು ಮತ್ತಷ್ಟು ಎತ್ತಿ ತೋರಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!