ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಕಲಾವಿದ, ಡ್ರಾಗ್ ಪರ್ಫಾರ್ಮರ್ ಹಾಗೂ ಸಾಮಾಜಿಕ ಕಾರ್ಯಕರ್ತ ರಾಣಿ ಕೋಹಿನೂರ್ (ಸುಶಾಂತ್ ದಿವ್ಗೀಕರ್), ಇತ್ತೀಚೆಗೆ ಪೂಜಾ ಚೌಧರಿ ಅವರ ‘ಇನ್‌ಕಾಂಟ್ರೋವರ್ಸಿಯಲ್’ ಪಾಡ್‌ಕಾಸ್ಟ್‌ನಲ್ಲಿ ಪಾಲ್ಗೊಂಡು ಸರ್ಕಾರ ಮತ್ತು ಸಮಾಜದ ಧೋರಣೆಯ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ತೃತೀಯ ಲಿಂಗಿಗಳ ತಿದ್ದುಪಡಿ ಮಸೂದೆಯು ಸಂಪೂರ್ಣವಾಗಿ ಅಸಂಬದ್ಧ ಎಂದು ಕರೆದಿರುವ ಅವರು, “ನಲ್ಸಾ (NALSA) ತೀರ್ಪಿನ ಮೂಲಕ ನಮಗೆ ಸಿಕ್ಕಿದ್ದ ಘನತೆಯನ್ನು ಈ ಮಸೂದೆ ಕಿತ್ತುಕೊಳ್ಳುತ್ತಿದೆ. ನಮ್ಮ ಅಸ್ತಿತ್ವಕ್ಕೆ ಬೆಲೆ ನೀಡಿದ ಮೊದಲ ದೇಶಗಳಲ್ಲಿ ಭಾರತವೂ ಒಂದಾಗಿತ್ತು, ಆದರೆ ಈಗ ಅದೇ ಹಕ್ಕನ್ನು ಹತ್ತಿಕ್ಕಲಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಕಾನೂನು ರೂಪಿಸುವವರ ಆದ್ಯತೆಗಳನ್ನು ಪ್ರಶ್ನಿಸಿದ ಕೋಹಿನೂರ್, “ದೇಶದಲ್ಲಿ ಅತ್ಯಾಚಾರಗಳು ನಡೆಯುತ್ತಿವೆ, ಮಕ್ಕಳ ಕಳ್ಳಸಾಗಣೆ ಅವ್ಯಾಹತವಾಗಿದೆ. ಈ ನೈಜ ಸಮಸ್ಯೆಗಳನ್ನು ಬಿಟ್ಟು ನಮ್ಮ ದೇಹಗಳ ಮೇಲೆ ನಿಮಗೆ ಯಾಕಿಷ್ಟು ಕಾಳಜಿ? ಮಹಿಳೆಯರ ಮತ್ತು ಲಿಂಗಪರಿವರ್ತಿತರ ಬಗ್ಗೆ ಕೇವಲ ಪುರುಷರು ಕಾನೂನು ಮಾಡುವುದರಲ್ಲಿ ಅರ್ಥವಿಲ್ಲ. ಯಾರ ಬಗ್ಗೆ ಕಾನೂನು ಮಾಡುತ್ತಿದ್ದೀರೋ, ಮೊದಲು ಆ ಸಮುದಾಯದವರನ್ನು ಚರ್ಚೆಗೆ ಆಹ್ವಾನಿಸಿ” ಎಂದು ಗುಡುಗಿದ್ದಾರೆ.
ಸಿನಿಮಾ ಮತ್ತು ಮನೋರಂಜನಾ ಲೋಕದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ ಅವರು, “ನಮ್ಮ ಕಥೆಗಳನ್ನು ತೋರಿಸಿ ಹಣ ಮಾಡುವವರು, ನಾವು ಸಂಕಷ್ಟದಲ್ಲಿದ್ದಾಗ ಬೆಂಬಲಕ್ಕೆ ಬರುವುದಿಲ್ಲ. ಪರದೆಯ ಮೇಲೆ ನಮ್ಮನ್ನು ಆಚರಿಸುವವರು ನಿಜ ಜೀವನದಲ್ಲಿ ನಮ್ಮನ್ನು ಕೈಬಿಡುತ್ತಾರೆ” ಎಂದು ಟೀಕಿಸಿದರು. ಇದೇ ವೇಳೆ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಅವರು, ಬಾತ್‌ರೂಮ್‌ನಲ್ಲಿ ಹಾಡುತ್ತಿದ್ದ ವ್ಯಕ್ತಿ ಇಂದು ಸಾವಿರಾರು ಜನರ ಮುಂದೆ ಹೆಮ್ಮೆಯಿಂದ ಪ್ರದರ್ಶನ ನೀಡುವ ಹಂತಕ್ಕೆ ಬೆಳೆದಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದರು.
ಕೊನೆಯಲ್ಲಿ ಸಮುದಾಯದ ಸದಸ್ಯರಿಗೆ ಧೈರ್ಯ ತುಂಬಿದ ಅವರು, “ನೀವು ಒಬ್ಬಂಟಿಯಲ್ಲ, ನಾನು ನಿಮಗಾಗಿ ನಿಲ್ಲುತ್ತೇನೆ. ಯಾವ ಮಸೂದೆ ಅಥವಾ ವ್ಯವಸ್ಥೆಯೂ ನಿಮ್ಮ ಅಸ್ತಿತ್ವವನ್ನು ಅಳಿಸಲು ಸಾಧ್ಯವಿಲ್ಲ” ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.



