ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ಜೋಡಿ ಕಳೆದ ಏಳು ವರ್ಷಗಳಿಂದ ಒಟ್ಟಿಗೆ ಡೇಟಿಂಗ್ ನಡೆಸುತ್ತಿದ್ದರು. ಅವಿವಾ ಬೇಗ್ ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿದ್ದು, ಎರಡೂ ಕುಟುಂಬಗಳು ಮದುವೆಗೆ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
ಇದರ ಬೆನ್ನಲ್ಲೇ ಅವಿವಾ ಬೇಗ್ ಯಾರು, ಇವರ ಹಿನ್ನಲೆ ಏನು ಎಂಬ ಹುಡುಕಾಟ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿದೆ.
ಮೂರು ದಿನಗಳ ಹಿಂದೆ ಅವಿವಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ರೈಹಾನ್ ಜೊತೆಗಿನ ಚಿತ್ರವನ್ನು ಅಪ್‌ಲೋಡ್ ಮಾಡಿದ್ದರು, ಈಗ ಅದನ್ನು ಅವರು ಮೂರು ಹೃದಯ ಎಮೋಜಿಗಳೊಂದಿಗೆ ‘ಹೈಲೈಟ್ಸ್’ ವಿಭಾಗದಲ್ಲಿ ಹಾಕಿದ್ದಾರೆ.
ಅವಿವಾ ಬೇಗ್ ಯಾರು?
ಅವಿವಾ ಬೇಗ್ ದೆಹಲಿ ಮೂಲದ ಛಾಯಾಗ್ರಾಹಕಿ. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಂವಹನವನ್ನು ಅಧ್ಯಯನ ಮಾಡಿದರು ಮತ್ತು ದೆಹಲಿಯ ಮಾಡರ್ನ್ ಶಾಲೆಯಲ್ಲಿ ಮಾನವಿಕ ವಿಷಯದಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.
ಭಾರತದಾದ್ಯಂತ ಏಜೆನ್ಸಿಗಳು, ಬ್ರ್ಯಾಂಡ್‌ಗಳು ಮತ್ತು ಗ್ರಾಹಕರೊಂದಿಗೆ ಕೆಲಸ ಮಾಡುವ ಛಾಯಾಗ್ರಹಣ ಸ್ಟುಡಿಯೋ ಮತ್ತು ನಿರ್ಮಾಣ ಕಂಪನಿಯಾದ ಅಟೆಲಿಯರ್ 11 ರ ಸಹ-ಸಂಸ್ಥಾಪಕಿಯೂ ಆಗಿದ್ದಾರೆ. ಅವರು ಹೆಚ್ಚಾಗಿ ತಮ್ಮ ಕ್ಯಾಮೆರಾದಲ್ಲಿ ದೈನಂದಿನ ಜೀವನ ಕುರಿತು ಫೋಟೊಗಳನ್ನು ಸೆರೆಹಿಡಿಯುತ್ತಿರುತ್ತಾರೆ.
ಮೆಥಡ್ ಗ್ಯಾಲರಿಯೊಂದಿಗೆ (2023) ‘ಯು ಕ್ಯಾನ್ ಮಿಸ್ ದಿಸ್’, ಇಂಡಿಯಾ ಆರ್ಟ್ ಫೇರ್‌ನ ಯಂಗ್ ಕಲೆಕ್ಟರ್ ಪ್ರೋಗ್ರಾಂ (2023) ನ ಭಾಗವಾಗಿ ‘ಯು ಕ್ಯಾನ್ ಮಿಸ್ ದಿಸ್’, ದಿ ಕ್ವೋರಮ್ ಕ್ಲಬ್‌ನಲ್ಲಿ (2019) ದಿ ಇಲ್ಯೂಸರಿ ವರ್ಲ್ಡ್ ಮತ್ತು ಇಂಡಿಯಾ ಡಿಸೈನ್ ಐಡಿ, ಕೆ2 ಇಂಡಿಯಾ (2018) ನಲ್ಲಿ ತಮ್ಮ ಕೃತಿಗಳನ್ನು ಪ್ರದರ್ಶಿಸಿದ್ದರು.
ಅವಿವಾ ಮಾಧ್ಯಮ ಮತ್ತು ಸಂವಹನದಲ್ಲಿ ವಿವಿಧ ಪಾತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಪ್ಲಸ್‌ರಿಮ್ನ್‌ನಲ್ಲಿ ಸ್ವತಂತ್ರ ನಿರ್ಮಾಪಕಿ, ಪ್ರೊಪಾಗಂಡದಲ್ಲಿ ಜೂನಿಯರ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದಾರೆ. ಆರ್ಟ್ ಚೈನ್ ಇಂಡಿಯಾದಲ್ಲಿ ಮಾರ್ಕೆಟಿಂಗ್ ಇಂಟರ್ನ್ ಆಗಿ ಕೆಲಸ ಮಾಡಿದ್ದಾರೆ. ಮತ್ತು ಐ-ಪಾರ್ಲಿಮೆಂಟ್‌ನಲ್ಲಿ ದಿ ಜರ್ನಲ್‌ನ ಪ್ರಧಾನ ಸಂಪಾದಕಿಯಾಗಿದ್ದರು. ಜತೆಗೆ ವರ್ವ್ ಮ್ಯಾಗಜೀನ್ ಇಂಡಿಯಾ ಮತ್ತು ಕ್ರಿಯೇಟಿವ್ ಇಮೇಜ್ ಮ್ಯಾಗಜೀನ್‌ನಲ್ಲಿ ಇಂಟರ್ನ್‌ಶಿಪ್‌ಗಳನ್ನು ಸಹ ಪೂರ್ಣಗೊಳಿಸಿದ್ದಾರೆ.
ಅವಿವಾ ಬೇಗ್ ತಂದೆಯ ಹೆಸರು ಇಮ್ರಾನ್ ಬೇಗ್. ಅವರು ದೆಹಲಿ ಮೂಲದ ಉದ್ಯಮಿ. ತಾಯಿ ನಂದಿತಾ ಬೇಗ್, ಪಸಿದ್ಧ ಇಂಟೀರಿಯರ್ ಡಿಸೈನರ್ (ಒಳಾಂಗಣ ವಿನ್ಯಾಸ). ಬೇಗ್ ಕುಟುಂಬವು ದೆಹಲಿಯ ಗಣ್ಯ ವಲಯಗಳಲ್ಲಿ ಬಲವಾದ ಸಾಮಾಜಿಕ ಮತ್ತು ವೃತ್ತಿಪರ ಸಂಪರ್ಕಗಳನ್ನು ಹೊಂದಿದೆ.
ರೈಹಾನ್ ವಾದ್ರಾ ಒಬ್ಬ ದೃಶ್ಯ ಕಲಾವಿದರಾಗಿದ್ದು, ಅವರು ಹತ್ತು ವರ್ಷದಿಂದಲೂ ಛಾಯಾಗ್ರಹಣವನ್ನು ಅನುಸರಿಸುತ್ತಿದ್ದಾರೆ. ಅವರು ಹೆಚ್ಚಾಗಿ ವನ್ಯಜೀವಿ, ಬೀದಿ ಮತ್ತು ವಾಣಿಜ್ಯ ಛಾಯಾಗ್ರಹಣದ ಆಸಕ್ತಿ ಹೊಂದಿದ್ದಾರೆ. ಅವರ ಮೊದಲ ಏಕವ್ಯಕ್ತಿ ಪ್ರದರ್ಶನ ದೆಹಲಿಯ ಬಿಕಾನೇರ್ ಹೌಸ್‌ನಲ್ಲಿತ್ತು. ಶಾಲಾ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಅವರು ಅನುಭವಿಸಿದ ಕಣ್ಣಿನ ಗಾಯದಿಂದ ಇದು ಪ್ರೇರಿತವಾಗಿತ್ತು.

