ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಇಂದು ಲೋಕಸಭೆಯಲ್ಲಿ ಆಪರೇಷನ್ ಸಿಂದೂರ್ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಚರ್ಚೆ ನಡೆಯಿತು.
ಕಾಂಗ್ರೆಸ್ ನಾಯಕಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳಿದ್ದಾರೆ.
ಅಹಿಂಸಾತ್ಮಕ ಚಳುವಳಿಯ ಮೂಲಕ ನಮ್ಮ ದೇಶದಲ್ಲಿ ಸ್ವಾತಂತ್ರ್ಯವನ್ನು ಸಾಧಿಸಲಾಗಿದೆ, ಆದರೆ 1948 ರಲ್ಲಿ ಪಾಕಿಸ್ತಾನದ ಮೊದಲ ಒಳನುಸುಳುವಿಕೆಯ ನಂತರ ನಮ್ಮ ಸಮಗ್ರತೆಯನ್ನು ಹಾಗೆಯೇ ಉಳಿಸಿಕೊಳ್ಳುವಲ್ಲಿ ಸೇನೆಯು ಬಹಳಷ್ಟು ಕೊಡುಗೆ ನೀಡಿದೆ ಎಂದು ಹೇಳಿದರು.
ರಕ್ಷಣಾ ಸಚಿವರ ಭಾಷಣದಲ್ಲಿ ಒಂದು ವಿಷಯ ನನಗೆ ಬೇಸರ ತರಿಸುತ್ತಿತ್ತು ಎಂದು ಹೇಳಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ, ಅವರು ಎಲ್ಲದರ ಬಗ್ಗೆ ಮಾತನಾಡಿದರು. ದೇಶದ ಬಗ್ಗೆ ಮಾತನಾಡಿದರು. ಇತಿಹಾಸದ ಬಗ್ಗೆಯೂ ಪಾಠ ಕಲಿಸಿದರು. ಆದರೆ ಪಹಲ್ಗಾಮ್‌ನಲ್ಲಿ ದಾಳಿ ಹೇಗೆ ಮತ್ತು ಏಕೆ ನಡೆಯಿತು ಎಂಬುದನ್ನು ಹೇಳಲಿಲ್ಲ ಎಂದು ಹೇಳಿದರು.
ಪಹಲ್ಗಾಮ್‌ನಲ್ಲಿ ದಾಳಿ ಹೇಗೆ ನಡೆಯಿತು, ಅದು ಏಕೆ ಸಂಭವಿಸಿತು? ಈ ಪ್ರಶ್ನೆ ಇನ್ನೂ ಕಾಡುತ್ತಿದೆ ಎಂದರು. ಶುಭಂ ದ್ವಿವೇದಿ ಅವರ ಪತ್ನಿಯ ಮಾತುಗಳನ್ನು ಉಲ್ಲೇಖಿಸಿದ ಪ್ರಿಯಾಂಕಾ ಗಾಂಧಿ, ‘ಜನರು ಸರ್ಕಾರವನ್ನು ನಂಬಿ ಪಹಲ್ಗಾಮ್‌ಗೆ ಹೋಗಿದ್ದರು, ಸರ್ಕಾರ ಅವರನ್ನು ದೇವರ ಕರುಣೆಗೆ ಬಿಟ್ಟಿತು’ ಓ ದಾಳಿಗೆ ಯಾರು ಹೊಣೆ? ನಾಗರಿಕರ ಸುರಕ್ಷತೆಯು ರಕ್ಷಣಾ ಸಚಿವರ ಜವಾಬ್ದಾರಿಯಲ್ಲವೇ, ಅದು ಗೃಹ ಸಚಿವರ ಜವಾಬ್ದಾರಿಯಲ್ಲವೇ? ಎಂದು ಕೇಂದ್ರ ಸರ್ಕಾರವನ್ನು ಕಟುವಾಗಿ ಪ್ರಶ್ನಿಸಿದರು.
ಈ ಭದ್ರತಾ ವೈಫಲ್ಯದ ಹೊಣೆಯನ್ನು ಯಾರು ಹೊತ್ತರು ? ಸೇನಾ ಮುಖ್ಯಸ್ಥರು ಹಾಗೆ ಮಾಡಿದ್ದಾರಾ, ಗುಪ್ತಚರ ಮುಖ್ಯಸ್ಥರು ಹಾಗೆ ಮಾಡಿದ್ದಾರಾ? ಗೃಹ ಸಚಿವರು ರಾಜೀನಾಮೆ ನೀಡಿದ್ದಾರಾ? ರಾಜೀನಾಮೆ ಬಿಟ್ಟು ಬಿಡಿ, ಅವರು ಕನಿಷ್ಠ ಇದರ ಜವಾಬ್ದಾರಿಯನ್ನೂ ತೆಗೆದುಕೊಳ್ಳಲಿಲ್ಲ. ನೀವು ಇತಿಹಾಸದ ಬಗ್ಗೆ ಮಾತನಾಡುತ್ತೀರಿ, ನಾನು ವರ್ತಮಾನದ ಬಗ್ಗೆ ಮಾತನಾಡುತ್ತೇನೆ. ನೀವು 11 ವರ್ಷಗಳಿಂದ ಅಧಿಕಾರದಲ್ಲಿದ್ದೀರಿ. ನಿನ್ನೆ ಗೌರವ್ ಗೊಗೊಯ್ ಜವಾಬ್ದಾರಿಯ ಬಗ್ಗೆ ಮಾತನಾಡುತ್ತಿರುವಾಗ ನಾನು ನೋಡುತ್ತಿದ್ದೆ, ರಾಜನಾಥ್ ಸಿಂಗ್ ತಲೆ ಅಲ್ಲಾಡಿಸುತ್ತಿದ್ದರು, ಆದರೆ ಗೃಹ ಸಚಿವರು ನಗುತ್ತಿದ್ದರು ಎಂದು ಟೀಕಿಸಿದರು.
ಪಹಲ್ಗಾಮ್ ದಾಳಿ ಸಂಭವಿಸಿದಾಗ ಎಲ್ಲರೂ ಒಗ್ಗಟ್ಟಿನಿಂದ ನಿಂತರು. ಅದು ಮತ್ತೆ ಸಂಭವಿಸಿದರೆ, ನಾವು ಮತ್ತೆ ಒಟ್ಟಿಗೆ ನಿಲ್ಲುತ್ತೇವೆ. ದೇಶದ ಮೇಲೆ ದಾಳಿ ನಡೆದರೆ, ನಾವೆಲ್ಲರೂ ಸರ್ಕಾರದ ಜೊತೆ ನಿಲ್ಲುತ್ತೇವೆ ಎಂದ ಪ್ರಿಯಾಂಕಾ ಗಾಂಧಿ, ಆಪರೇಷನ್ ಸಿಂದೂರ್‌ನಲ್ಲಿ ಸೈನ್ಯವು ಧೈರ್ಯದಿಂದ ಹೋರಾಡಿತು, ಆದರೆ ಪ್ರಧಾನ ಮಂತ್ರಿಗಳು ಅದರ ಕ್ರೆಡಿಟ್ ತೆಗೆದುಕೊಳ್ಳಲು ಬಯಸುತ್ತಾರೆ. ಅದು ಸರಿ, ಪ್ರಧಾನ ಮಂತ್ರಿಗಳು ಅದರ ಕ್ರೆಡಿಟ್ ಬಯಸುತ್ತಾರೆ. ಒಲಿಂಪಿಕ್‌ನಲ್ಲಿ ನಮ್ಮ ದೇಶದ ಕ್ರೀಡಾಪಟುಗಳು ಪದಕ ಗೆದ್ದಾಗ ಅದರಲ್ಲೂ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.