January21, 2026
Wednesday, January 21, 2026
spot_img

ಬೆಳಗಾವಿ ಯಾರಿಗೆ? ‘ಸುಪ್ರೀಂ’ ಅಂಗಳದಲ್ಲಿ ಕರ್ನಾಟಕ-ಮಹಾರಾಷ್ಟ್ರ ಹೈವೋಲ್ಟೇಜ್ ಕದನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಗಡಿ ವಿವಾದದ ಕಾನೂನು ಹೋರಾಟವು ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಿರ್ಣಾಯಕ ಹಂತ ತಲುಪಲಿದೆ. ಸುಮಾರು 22 ವರ್ಷಗಳ ಹಿಂದೆ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಕೈಗೆತ್ತಿಕೊಳ್ಳುತ್ತಿದ್ದು, ಇಡೀ ರಾಜ್ಯದ ಕಣ್ಣು ದೆಹಲಿಯ ನ್ಯಾಯಪೀಠದತ್ತ ನೆಟ್ಟಿದೆ.

ಬೆಳಗಾವಿ ಸೇರಿದಂತೆ ಕರ್ನಾಟಕದ ಗಡಿ ಭಾಗದಲ್ಲಿರುವ 865 ನಗರ, ಪಟ್ಟಣ ಹಾಗೂ ಗ್ರಾಮಗಳು ತನಗೆ ಸೇರಬೇಕು ಎಂಬುದು ಮಹಾರಾಷ್ಟ್ರದ ವಾದ. ಈ ಸಂಬಂಧ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬೇಕೇ ಅಥವಾ ವಜಾಗೊಳಿಸಬೇಕೇ ಎಂಬ ಮಹತ್ವದ ತೀರ್ಮಾನ ಇಂದು ಹೊರಬೀಳುವ ಸಾಧ್ಯತೆಯಿದೆ.

ಈಗಾಗಲೇ ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಷ್ಟ್ರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. “ರಾಜ್ಯಗಳ ಗಡಿ ರೇಖೆ ಗುರುತಿಸುವ ಪರಮಾಧಿಕಾರ ಇರುವುದು ಕೇವಲ ದೇಶದ ಸಂಸತ್ತಿಗೆ ಮಾತ್ರ. ಇದು ಸುಪ್ರೀಂ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ” ಎಂಬ ಸಂವಿಧಾನಾತ್ಮಕ ಅಂಶವನ್ನು ಕರ್ನಾಟಕ ಪ್ರಮುಖವಾಗಿ ಪ್ರತಿಪಾದಿಸುತ್ತಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ಪರವಾಗಿ ನ್ಯಾಯವಾದಿ ನಿಶಾಂತ್ ಪಾಟೀಲ್ ವಾದ ಮಂಡಿಸಲಿದ್ದಾರೆ. ಮಹಾರಾಷ್ಟ್ರದ ಅರ್ಜಿಯನ್ನು ಮೊದಲ ಹಂತದಲ್ಲೇ ತಿರಸ್ಕರಿಸುವಂತೆ ಮಾಡಲು ಕರ್ನಾಟಕದ ಕಾನೂನು ತಂಡವು ಸಕಲ ದಾಖಲೆಗಳೊಂದಿಗೆ ಸಜ್ಜಾಗಿದೆ.

ಈ ವಿಚಾರಣೆಯು ಕೇವಲ ಭೂಭಾಗದ ವಿವಾದವಾಗಿರದೆ, ಲಕ್ಷಾಂತರ ಕನ್ನಡಿಗರ ಭಾವನೆ ಮತ್ತು ಭಾಷಾ ಅಸ್ಮಿತೆಯ ಪ್ರಶ್ನೆಯೂ ಆಗಿರುವುದರಿಂದ ಇಂದಿನ ನ್ಯಾಯಾಲಯದ ನಡಾವಳಿಗಳು ತೀವ್ರ ಕುತೂಹಲ ಕೆರಳಿಸಿವೆ.

Must Read