ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಕ್ಕುಂಡಿಯ ಮನೆಯೊಂದರಲ್ಲಿ ಪತ್ತೆಯಾದ ಬಂಗಾರದ ವಿಚಾರವಾಗಿ ಉಂಟಾಗಿರುವ ಗೊಂದಲಕ್ಕೆ ಗದಗ ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವರಾದ ಹೆಚ್.ಕೆ. ಪಾಟೀಲ್ ಅವರು ತೆರೆ ಎಳೆದಿದ್ದಾರೆ. “ಭೂಮಿಯ ಒಳಗೆ ಯಾವುದೇ ಬೆಲೆಬಾಳುವ ವಸ್ತುಗಳು ಪತ್ತೆಯಾದರೂ ಅದು ಕಾನೂನಿನ ಪ್ರಕಾರ ಸರ್ಕಾರದ ಆಸ್ತಿಯಾಗಿರುತ್ತದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಲಕ್ಕುಂಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಅಲ್ಲಿನ ಎಎಸ್‌ಐ ಅಧಿಕಾರಿ ಸಂತೋಷ್ ಅವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು. “ಅದು ಕುಟುಂಬದ ಬಂಗಾರ ಎಂದು ಹೇಳುವ ಮೂಲಕ ಇಲ್ಲದ ಗೊಂದಲ ಮೂಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಎಚ್ಚರಿಕೆ ನೀಡಿದರು.
ಸದ್ಯ ಪತ್ತೆಯಾಗಿರುವ ಬಂಗಾರವನ್ನು ಜಿಲ್ಲಾಡಳಿತದ ವತಿಯಿಂದ ಸುರಕ್ಷಿತವಾಗಿ ಖಜಾನೆಯಲ್ಲಿ ಇರಿಸಲಾಗಿದೆ. ಈ ಬಂಗಾರವು ರಾಷ್ಟ್ರಕೂಟರ ಕಾಲದ್ದೇ ಅಥವಾ ಚಾಲುಕ್ಯರ ಕಾಲದ್ದೇ? ಇದು ಆ ಜಾಗದ ಮೂಲ ಮಾಲಿಕರಿಗೆ ಸೇರಿದ್ದೇ? ಎಂಬ ಬಗ್ಗೆ ಪುರಾತತ್ವ ಇಲಾಖೆಯಿಂದ ಸಮಗ್ರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಬಂಗಾರ ಸಿಕ್ಕ ತಕ್ಷಣ ಅದನ್ನು ಸರ್ಕಾರಕ್ಕೆ ಒಪ್ಪಿಸಿದ ಕುಟುಂಬದ ಪ್ರಾಮಾಣಿಕತೆಯನ್ನು ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಮುಖ್ಯಮಂತ್ರಿಗಳು ಈಗಾಗಲೇ ಆ ಕುಟುಂಬವನ್ನು ಅಭಿನಂದಿಸಿದ್ದಾರೆ. ಸರ್ಕಾರದ ವತಿಯಿಂದಲೂ ಅವರಿಗೆ ಸೂಕ್ತ ಗೌರವ ಹಾಗೂ ಸನ್ಮಾನವನ್ನು ಮಾಡಲಾಗುವುದು,” ಎಂದು ಅವರು ತಿಳಿಸಿದರು.



