ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾದ ಆನಂದಪುರದ ವೇರ್‌ಹೌಸ್ ಮತ್ತು ಮೊಮೊ ಕಾರ್ಖಾನೆಯಲ್ಲಿ ನಡೆದ ಅಗ್ನಿ ದುರಂತ ಆಕಸ್ಮಿಕ ಘಟನೆಯಲ್ಲ. ಮಮತಾ ಬ್ಯಾನರ್ಜಿ ಸರ್ಕಾರದ ಭ್ರಷ್ಟಾಚಾರವೇ ಇದಕ್ಕೆ ಕಾರಣ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದರು.
ಉತ್ತರ-24 ಪರಗಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಬೆಂಕಿ ಅವಘಡದಲ್ಲಿ ಪ್ರಾಣ ಕಳೆದುಕೊಂಡ ಎಲ್ಲಾ ಕಾರ್ಮಿಕರಿಗೆ ನನ್ನ ಸಂತಾಪ ಸೂಚಿಸುತ್ತೇನೆ. ಆದ್ರೆ ಆನಂದಪುರ ಬೆಂಕಿ ಘಟನೆ ಆಕಸ್ಮಿಕ ಅಲ್ಲ. ಮಮತಾ ಬ್ಯಾನರ್ಜಿ ಸರ್ಕಾರದ ಭಷ್ಟ್ರಾಚಾರದ ಪರಿಣಾಮ ಎಂದು ಗುಡುಗಿದರು.
ಮೊಮೊ ಕಾರ್ಖಾನೆಯಲ್ಲಿ ಯಾರ ಹಣ ಹೂಡಿಕೆಯಾಗಿದೆ? ಕಾರ್ಖಾನೆ ಮಾಲೀಕರು ಯಾರೊಂದಿಗೆ ವಿದೇಶಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ? ಮಾಲೀಕರನ್ನ ಇನ್ನೂ ಏಕೆ ಬಂಧಿಸಿಲ್ಲ? ಎಂದು ಪ್ರಶ್ನೆ ಮಾಡಿದರು.
ಈ ಘಟನೆ ಹಿಂದೆ ಪಕ್ಷದ ಭ್ರಷ್ಟಾಚಾರವಿಲ್ಲ ಎಂದು ಟಿಎಂಸಿ ಕೂಗಿ ಕೂಗಿ ಹೇಳುತ್ತಿದೆ. ಆದ್ರೆ ಘಟನೆ ನಡೆದು 32 ಗಂಟೆಗಳ ನಂತರ ಸಚಿವರು ಸ್ಥಳಕ್ಕೆ ಬಂದಿದ್ದಾರೆ. ಜೊತೆಗೆ ಇದು ರಾಜ್ಯ ಆಡಳಿತ ಮತ್ತು ಪರಿಸ್ಥಿತಿಯ ಬಗ್ಗೆಯೂ ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಮುಖ್ಯಮಂತ್ರಿಗಳು ಈ ಘಟನೆ ಸಂಪೂರ್ಣ ತನಿಖೆಗೆ ಆದೇಶಿಸಬೇಕು. ನಿಜವಾದ ಅಪರಾಧಿಗಳನ್ನ ಪತ್ತೆ ಮಾಡಿ ಜೈಲಿಗಟ್ಟಬೇಕು ಎಂದು ಒತ್ತಾಯಿಸಿದರು.



