ನಾವು ಮಾಲ್, ಹೋಟೆಲ್ ಅಥವಾ ಯಾವುದೇ ದೊಡ್ಡ ಕಟ್ಟಡಕ್ಕೆ ಹೋದಾಗ ಲಿಫ್ಟ್‌ನಲ್ಲಿ ಮೊದಲು ಗಮನ ಸೆಳೆಯುವುದೇ ಅಳವಡಿಸಿರುವ ಕನ್ನಡಿಯೇ. ಲಿಫ್ಟ್‌ಗೆ ಕಾಲಿಟ್ಟ ತಕ್ಷಣ ಹಲವರು ತಮ್ಮ ಹೇರ್‌ಸ್ಟೈಲ್ ಸರಿಪಡಿಸಿಕೊಳ್ಳುತ್ತಾರೆ, ಉಡುಪನ್ನು ಸರಿಯಾಗಿ ಅಳವಡಿಸಿಕೊಳ್ಳುತ್ತಾರೆ. ಆದರೆ ಕೇವಲ ಅಲಂಕಾರಕ್ಕಾಗಿ ಮಾತ್ರ ಕನ್ನಡಿಯನ್ನು ಅಳವಡಿಸಿರುವುದಿಲ್ಲ. ಇದಕ್ಕೆ ಮಾನಸಿಕ, ಸಾಮಾಜಿಕ ಹಾಗೂ ಸುರಕ್ಷತಾ ಕಾರಣಗಳಿವೆ.
ಮಾನಸಿಕ ನಿರಾಳತೆ
ಲಿಫ್ಟ್ ಮುಚ್ಚಿದ ಸೀಮಿತ ಜಾಗವಾಗಿರುವುದರಿಂದ ಕೆಲವರಿಗೆ ಆತಂಕ ಅಥವಾ ಕ್ಲಾಸ್ಟ್ರೋಫೋಬಿಯಾ ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳುವುದರಿಂದ ಗಮನ ಬದಲಾಗುತ್ತದೆ ಮತ್ತು ಆತಂಕ ಕಡಿಮೆಯಾಗುತ್ತದೆ.
ಸುರಕ್ಷತೆ ಮತ್ತು ಭದ್ರತೆ
ಕನ್ನಡಿಯ ಮೂಲಕ ನಮ್ಮ ಹಿಂದೆ ನಿಂತವರ ಚಲನೆ ಸ್ಪಷ್ಟವಾಗಿ ಕಾಣುತ್ತದೆ. ಹೀಗಾಗಿ ಪ್ರಯಾಣಿಕರಲ್ಲಿ ಎಚ್ಚರಿಕೆ ಮೂಡುತ್ತದೆ ಮತ್ತು ಭದ್ರತೆಯ ಭಾವನೆ ಹೆಚ್ಚುತ್ತದೆ. ಲಿಫ್ಟ್‌ನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ಇದು ಪ್ರಮುಖ.
ವಿಶೇಷಚೇತನರಿಗೆ ಅನುಕೂಲ
ಆಸ್ಪತ್ರೆಗಳಲ್ಲಿ ವ್ಹೀಲ್‌ಚೇರ್‌ನಲ್ಲಿ ಬರುವ ರೋಗಿಗಳನ್ನು ಹಿಂಬದಿಯಿಂದ ಸುಲಭವಾಗಿ ಹೊರತೆಗೆದುಕೊಳ್ಳಲು ಕನ್ನಡಿಗಳು ಸಹಾಯಕವಾಗುತ್ತವೆ. ಹೀಗಾಗಿ ಸಿಬ್ಬಂದಿಗೆ ತಮ್ಮ ಹಿಂದೆ ಇರುವ ಪರಿಸ್ಥಿತಿಯನ್ನು ಅರಿಯುವುದು ಸುಲಭವಾಗುತ್ತದೆ.
ಚಿತ್ತ ಚಾಂಚಲ್ಯ ಕಡಿಮೆ
ಹೆಚ್ಚಿನವರು ಲಿಫ್ಟ್ ಶೀಘ್ರವಾಗಿ ತಲುಪಬೇಕೆಂದು ಕಾದು ತಾಳ್ಮೆ ಕಳೆದುಕೊಳ್ಳುತ್ತಾರೆ. ಆದರೆ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳುವುದರಿಂದ ಆ ಚಂಚಲತೆ ಮರೆತು, ಪ್ರಯಾಣ ಸುಲಭವಾಗಿ ಮುಗಿಯುತ್ತದೆ.
ಜಪಾನ್‌ನ ಪ್ರೇರಣೆ
ಲಿಫ್ಟ್‌ಗಳಲ್ಲಿ ಕನ್ನಡಿಯನ್ನು ಅಳವಡಿಸುವುದಕ್ಕೆ ಮೂಲ ಕಾರಣ ಜಪಾನ್‌ನ Elevator Association of Japan ನೀಡಿದ ಮಾರ್ಗಸೂಚಿಯೇ. ಅಧ್ಯಯನದ ಪ್ರಕಾರ, ಕನ್ನಡಿಗಳು ಪ್ರಯಾಣಿಕರಲ್ಲಿ ನಿರಾಳತೆ ಮತ್ತು ಭದ್ರತೆಯನ್ನು ಒದಗಿಸುತ್ತವೆ.