ಆರೋಗ್ಯವು ನಮಗೆ ದೊರೆತಿರುವ ಅಮೂಲ್ಯವಾದ ವರ. ದೇಹ ಅಸ್ವಸ್ಥವಾದಾಗ ವೈದ್ಯರನ್ನು ಭೇಟಿಯಾಗಿ ಔಷಧಿ ಸೇವಿಸುವುದು ಸಹಜ. ವೈದ್ಯರು ನೀಡುವ ಮಾತ್ರೆಗಳು ಹಲವಾರು ಬಣ್ಣಗಳಲ್ಲಿ ಲಭ್ಯವಾಗುತ್ತವೆ. ಕೆಲವೊಮ್ಮೆ ಕೆಂಪು, ಹಸಿರು, ನೀಲಿ, ಹಳದಿ ಅಥವಾ ಬಿಳಿ ಬಣ್ಣದ ಮಾತ್ರೆಗಳನ್ನು ನಾವು ನೋಡುತ್ತೇವೆ. ಆದರೆ ಈ ಬಣ್ಣಗಳು ಕೇವಲ ಆಕರ್ಷಣೆಗೆ ಮಾತ್ರವಲ್ಲ, ಇದರ ಹಿಂದೆ ಹಲವಾರು ವೈಜ್ಞಾನಿಕ ಕಾರಣಗಳಿವೆ. ರೋಗಿಯ ಸುಲಭ ಗುರುತಿನೊಂದಿಗೆ ಔಷಧಿಯ ಗುಣಮಟ್ಟ ಕಾಪಾಡುವವರೆಗೂ ಬಣ್ಣಗಳಿಗೆ ವಿಶೇಷ ಮಹತ್ವವಿದೆ.

ರೋಗಿಯ ಗುರುತಿಗೆ ಸಹಾಯಕ – ಎಲ್ಲಾ ಮಾತ್ರೆಗಳು ಒಂದೇ ಬಣ್ಣದಲ್ಲಿದ್ದರೆ, ಯಾವ ಔಷಧಿಯನ್ನು ಯಾವಾಗ ತೆಗೆದುಕೊಳ್ಳಬೇಕು ಎಂದು ಗುರುತಿಸಲು ಕಷ್ಟವಾಗುತ್ತದೆ. ವಿಶೇಷವಾಗಿ ವಯೋವೃದ್ಧರು ಮತ್ತು ದೃಷ್ಟಿ ಸಮಸ್ಯೆ ಹೊಂದಿರುವವರಿಗೆ ಬಣ್ಣಗಳು ಬಹಳ ಉಪಯುಕ್ತ.

ವೈದ್ಯರು ಮತ್ತು ಔಷಧ ವಿತರಕರಿಗೆ ಸುಲಭ – ಬಣ್ಣಗಳಿಂದ ಮಾತ್ರೆಗಳನ್ನು ಬೇಗನೆ ಗುರುತಿಸಬಹುದು. ಇದು ತಪ್ಪು ಸಾಧ್ಯತೆಯನ್ನು ಕಡಿಮೆ ಮಾಡಿ, ರೋಗಿಗೆ ಸರಿಯಾದ ಔಷಧಿ ತಲುಪಲು ಸಹಾಯ ಮಾಡುತ್ತದೆ.

ಮಾನಸಿಕ ಪರಿಣಾಮ – ಕೆಲ ಬಣ್ಣಗಳು ರೋಗಿಯ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಉದಾಹರಣೆಗೆ, ನೀಲಿ ಮತ್ತು ಹಸಿರು ಬಣ್ಣದ ಮಾತ್ರೆಗಳು ಶಾಂತಗೊಳಿಸುವ ಗುಣ ಹೊಂದಿರುವುದರಿಂದ ನೋವು ನಿವಾರಕ ಅಥವಾ ನಿದ್ರಾಜನಕಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಕೆಂಪು, ಕಿತ್ತಳೆ ಬಣ್ಣದ ಮಾತ್ರೆಗಳು ಶಕ್ತಿ ಹೆಚ್ಚಿಸುವ ಔಷಧಿಗಳಿಗೆ ಬಳಸಲಾಗುತ್ತದೆ.

ಸೂರ್ಯನ ಬೆಳಕಿನಿಂದ ರಕ್ಷಣೆ – ಕೆಲವು ಔಷಧಿಗಳು ಬೆಳಕಿನಲ್ಲಿ ಬೇಗ ಹಾಳಾಗುತ್ತವೆ. ಅದಕ್ಕಾಗಿ ಗಾಢ ಬಣ್ಣದ ಲೇಪನಗಳು ಸೂರ್ಯನ ಬೆಳಕಿನಿಂದ ರಕ್ಷಣೆ ನೀಡಿ ಔಷಧದ ಗುಣಮಟ್ಟವನ್ನು ಕಾಪಾಡುತ್ತವೆ.

ರುಚಿ ಮತ್ತು ವಾಸನೆ ಮರೆಮಾಡುವುದು – ಹಲವಾರು ಔಷಧಿಗಳು ಕಹಿಯಾಗಿರುತ್ತವೆ. ಬಣ್ಣದ ಲೇಪನಗಳು ಅವುಗಳನ್ನು ಆಕರ್ಷಕವಾಗಿಸುವುದಲ್ಲದೆ ರುಚಿಯನ್ನು ಸಹ ಮರೆಮಾಡುತ್ತವೆ. ವಿಶೇಷವಾಗಿ ಮಕ್ಕಳಿಗೆ ಇಷ್ಟವಾಗುವಂತೆ ಚಾಕೊಲೇಟ್ ಅಥವಾ ಸ್ಟ್ರಾಬೆರಿ ರುಚಿಯ ಸಿರಪ್‌ಗಳು, ವರ್ಣರಂಜಿತ ಮಾತ್ರೆಗಳು ತಯಾರಿಸಲಾಗುತ್ತವೆ.