February 18, 2026
Wednesday, February 18, 2026
spot_img

ಸತ್ಯಹರಿಶ್ಚಂದ್ರನ ಮಕ್ಕಳು ಸಾಕ್ಷಿ ಕೇಳುತ್ತಿರುವುದೇಕೆ?: ಕಾಂಗ್ರೆಸ್‌ಗೆ ಆರ್.ಅಶೋಕ್ ನೇರ ಸವಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಕಾಂಗ್ರೆಸ್‌ ಸರ್ಕಾರ ಕಮಿಷನ್‌ ಆರೋಪಗಳ ವಿಚಾರದಲ್ಲಿ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌ ಅಶೋಕ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಗಂಭೀರ ಭ್ರಷ್ಟಾಚಾರದ ಆರೋಪಗಳ ಪಟ್ಟಿಯನ್ನೇ ಬಿಚ್ಚಿಟ್ಟರು.

ಗುತ್ತಿಗೆದಾರರ ಸಂಘ ಮಾಡಿರುವ 80% ಕಮಿಷನ್ ಆರೋಪವನ್ನು ಸುಳ್ಳು ಎಂದು ಹೇಳುವ ಕಾಂಗ್ರೆಸ್ ನಾಯಕರಿಗೆ ಅಶೋಕ್ ನೇರ ಸವಾಲು ಹಾಕಿದ್ದಾರೆ. “ಹಿಂದಿನ ಸರ್ಕಾರದ ಮೇಲೆ ಆರೋಪ ಬಂದಾಗ ಸಾಕ್ಷಿ ಕೇಳದವರು, ಈಗ ತಮ್ಮ ಸರದಿ ಬಂದಾಗ ಸಾಕ್ಷಿ ಕೇಳುತ್ತಿರುವುದೇಕೆ? ನೀವು ನಿಜವಾಗಿಯೂ ನಿರಪರಾಧಿಗಳಾದರೆ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ” ಎಂದು ಆಗ್ರಹಿಸಿದರು.

ಬೆಂಗಳೂರಿನ ಕಸ ವಿಲೇವಾರಿ ವಿಚಾರದಲ್ಲಿ ಸರ್ಕಾರ ಭೀಕರ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಅಶೋಕ್ ಆರೋಪಿಸಿದರು. ಅವರ ಲೆಕ್ಕಾಚಾರದ ಪ್ರಕಾರ:

ಟೆಂಡರ್ ಪಡೆಯಲು: 7% ಕಮಿಷನ್

ಬಿಲ್ ಬಿಡುಗಡೆಗೆ: 7% ಕಮಿಷನ್

ವಿಶೇಷ ಎಲ್‌ಒಸಿ (LOC) ಪಡೆಯಲು: 7% ಕಮಿಷನ್

ಹೀಗೆ ಒಟ್ಟು 21% ಕಮಿಷನ್ ನೇರವಾಗಿ ಸರ್ಕಾರಕ್ಕೆ ಸಂದಾಯವಾಗುತ್ತಿದೆ. ಇಂಜಿನಿಯರ್‌ಗಳ ಪಾಲನ್ನು ಹೊರತುಪಡಿಸಿಯೇ ಈ ದಂಧೆ ನಡೆಯುತ್ತಿದ್ದು, ಕಸದ ಸಮಸ್ಯೆಗೆ ಸರ್ಕಾರದ ಈ ‘ಮಾಫಿಯಾ’ವೇ ಕಾರಣ ಎಂದರು.

ರಾಜ್ಯದ ಟೆಂಡರ್‌ಗಳು ನೆರೆಯ ಆಂಧ್ರಪ್ರದೇಶದ ಪಾಲಾಗುತ್ತಿವೆ. ವಿಶೇಷವಾಗಿ ಕೆಕೆಆರ್‌ಡಿಬಿ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡುವ ಬದಲು ಹೊರರಾಜ್ಯದವರಿಗೆ ಮಣೆ ಹಾಕಲಾಗುತ್ತಿದೆ ಎಂದು ಅವರು ಕಿಡಿಕಾರಿದರು.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ಕ್ರಮವನ್ನು ಖಂಡಿಸಿದ ಅಶೋಕ್, ಇದು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವನ್ನು ಹತ್ತಿಕ್ಕುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಬಿಎ ಚುನಾವಣೆ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಯಾವುದೇ ಗೊಂದಲವಿಲ್ಲ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಹೈಕಮಾಂಡ್ ಸೂಚನೆಯಂತೆ ಮೈತ್ರಿ ಧರ್ಮ ಪಾಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !