Wednesday, January 14, 2026
Wednesday, January 14, 2026
spot_img

ಚಲಿಸುವ ವಾಹನಗಳನ್ನು ನಾಯಿಗಳು ಬೆನ್ನಟ್ಟುವುದೇಕೆ? ಇಲ್ಲಿದೆ ವೈಜ್ಞಾನಿಕ ಕಾರಣ!

ನಾಯಿಗಳನ್ನು ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದು ಪರಿಗಣಿಸಲಾಗುತ್ತದೆ. ಅವು ಮನುಷ್ಯರೊಂದಿಗೆ ಅತ್ಯಂತ ಸ್ನೇಹಪರವಾಗಿ ವರ್ತಿಸುತ್ತವೆ. ಆದರೆ, ರಸ್ತೆಯಲ್ಲಿ ನಾವು ಎಷ್ಟೇ ಫ್ರೆಂಡ್ಲಿ ನಾಯಿಗಳನ್ನು ನೋಡಿದ್ದರೂ, ವಿಶೇಷವಾಗಿ ಬೀದಿ ನಾಯಿಗಳು ಕೆಲವೊಮ್ಮೆ ತಮ್ಮ ಆಕ್ರಮಣಕಾರಿ ವರ್ತನೆಯಿಂದ ಅಚ್ಚರಿ ಮೂಡಿಸುತ್ತವೆ.

ರಸ್ತೆ ಬದಿಯಲ್ಲಿ ನಡೆದು ಹೋಗುವವರನ್ನು ಬೆನ್ನಟ್ಟುವುದು, ಬೈಕ್‌, ಸ್ಕೂಟರ್‌, ಕಾರುಗಳಂತಹ ಚಲಿಸುವ ವಾಹನಗಳನ್ನು ಬೊಗಳುತ್ತಾ ಅಟ್ಟಾಡಿಸಿಕೊಂಡು ಹೋಗುವುದು ಸಾಮಾನ್ಯ ದೃಶ್ಯ. ನಾಯಿಗಳ ಈ ಬೆನ್ನುಹತ್ತುವ ವರ್ತನೆಯಿಂದ ಅನೇಕ ಅಪಘಾತಗಳು ಸಹ ಸಂಭವಿಸಿವೆ. ಅಷ್ಟಕ್ಕೂ ಈ ನಿಷ್ಠಾವಂತ ಶ್ವಾನಗಳು ಚಲಿಸುವ ವಾಹನಗಳನ್ನು ಏಕೆ ಅಟ್ಟಾಡಿಸಿಕೊಂಡು ಹೋಗುತ್ತವೆ? ಇದರ ಹಿಂದೆ ಒಂದು ವೈಜ್ಞಾನಿಕ ಕಾರಣ ಅಡಗಿದೆ.

ಇದರ ಹಿಂದಿರುವ ವೈಜ್ಞಾನಿಕ ಕಾರಣವೇನು?
ನಾಯಿಗಳು ತಮ್ಮ ಪ್ರದೇಶದ ಗಡಿಯನ್ನು ಗುರುತಿಸುವ (Territory Marking) ಸಹಜ ಸ್ವಭಾವವನ್ನು ಹೊಂದಿರುತ್ತವೆ. ಕಾಡು ಪ್ರಾಣಿಗಳಂತೆಯೇ, ನಾಯಿಗಳು ಸಹ ಟೈರ್‌ಗಳು, ಕಂಬಗಳು ಮತ್ತು ಗೋಡೆಗಳ ಮೇಲೆ ಮೂತ್ರ ವಿಸರ್ಜಿಸಿ, ಆ ವಾಸನೆಯ ಮೂಲಕ ತಮ್ಮ ವಾಸಸ್ಥಾನವನ್ನು ಗುರುತಿಸುತ್ತವೆ.

ಅತ್ಯಂತ ತೀಕ್ಷ್ಣವಾದ ವಾಸನೆಯ ಶಕ್ತಿಯನ್ನು ಹೊಂದಿರುವ ನಾಯಿಗಳು, ತಮ್ಮ ಪ್ರದೇಶದೊಳಗೆ ಬಂದ ಇತರ ನಾಯಿಗಳ ವಾಸನೆಯನ್ನು ಬೇಗನೆ ಪತ್ತೆ ಮಾಡುತ್ತವೆ. ನಿಮ್ಮ ವಾಹನವು ರಸ್ತೆಯಲ್ಲಿ ಚಲಿಸುವಾಗ, ಟೈರ್‌ಗಳು ಇತರ ಪ್ರದೇಶಗಳ ನಾಯಿಗಳ ಮೂತ್ರದ ವಾಸನೆಯನ್ನು ತಮ್ಮೊಂದಿಗೆ ಹೊತ್ತು ತರುತ್ತವೆ.

ಒಂದು ಪ್ರದೇಶದ ನಾಯಿಗಳು, ನಿಮ್ಮ ವಾಹನದ ಟೈರ್‌ಗಳಲ್ಲಿ ಬೇರೆ ನಾಯಿಯ ವಾಸನೆಯನ್ನು ಗ್ರಹಿಸಿದ ತಕ್ಷಣ, ಅದು ತಮ್ಮ ನೆಲೆಯನ್ನು ಪ್ರವೇಶಿಸಿದ ವೈರಿ ಎಂದು ಭಾವಿಸಿ, ತಕ್ಷಣ ನಿಮ್ಮ ವಾಹನವನ್ನು ಬೆನ್ನಟ್ಟಲು ಪ್ರಾರಂಭಿಸುತ್ತವೆ. ಬೇರೆ ನಾಯಿಯ ವಾಸನೆಯು ಈ ಶ್ವಾನಗಳನ್ನು ಕೆರಳಿಸುತ್ತದೆ ಮತ್ತು ಅವು ತಮ್ಮ ಪ್ರದೇಶವನ್ನು ರಕ್ಷಿಸಲು ಪ್ರಯತ್ನಿಸುತ್ತವೆ.

ಭಾವನಾತ್ಮಕ ಕಾರಣವೂ ಇರಬಹುದು!
ಕೆಲವೊಮ್ಮೆ ಭಾವನಾತ್ಮಕ ಕಾರಣಗಳಿಂದಲೂ ನಾಯಿಗಳು ವಾಹನಗಳನ್ನು ಬೆನ್ನಟ್ಟಬಹುದು. ನಾಯಿಗಳು ಸೂಕ್ಷ್ಮ ಸಂವೇದಿ ಜೀವಿಗಳು. ಅವುಗಳ ಗುಂಪಿನ ಯಾವುದೇ ನಾಯಿ ಅಪಘಾತದಲ್ಲಿ ಗಾಯಗೊಂಡರೆ ಅಥವಾ ಮರಣ ಹೊಂದಿದರೆ, ಅಂತಹ ಘಟನೆಗೆ ಕಾರಣವಾದ ಅದೇ ರೀತಿಯ ವಾಹನಗಳ ಮೇಲೆ ಕೋಪದಿಂದ ಆಕ್ರಮಣ ಮಾಡಬಹುದು.

ಅಪಾಯವನ್ನು ತಪ್ಪಿಸಲು ಹೀಗೆ ಮಾಡಿ
ಒಂದು ವೇಳೆ ನಾಯಿ ನಿಮ್ಮ ಬೈಕ್‌ ಅಥವಾ ಕಾರನ್ನು ಬೆನ್ನಟ್ಟಲು ಪ್ರಾರಂಭಿಸಿದರೆ, ಅಪಘಾತಗಳನ್ನು ತಪ್ಪಿಸಲು ವಾಹನದ ವೇಗವನ್ನು ಹೆಚ್ಚಿಸಬಾರದು. ಸಾಮಾನ್ಯವಾಗಿ ನಾಯಿಗಳು 100 ರಿಂದ 200 ಮೀಟರ್‌ಗಳಷ್ಟು ದೂರದ ನಂತರ ಬೆನ್ನಟ್ಟುವುದು ನಿಲ್ಲಿಸುತ್ತವೆ.

ಅಲ್ಲದೆ, ನಾಯಿಗಳು ಜೋರಾದ ಶಬ್ದಗಳಿಗೆ ಹೆದರುತ್ತವೆ. ಹಾಗಾಗಿ, ನಾಯಿ ನಿಮ್ಮ ವಾಹನವನ್ನು ಬೆನ್ನಟ್ಟಲು ಪ್ರಾರಂಭಿಸಿದರೆ, ಕೆಲವು ಸೆಕೆಂಡುಗಳ ಕಾಲ ನಿರಂತರವಾಗಿ ಹಾರ್ನ್ ಮಾಡಿ. ಈ ಜೋರಾದ ಶಬ್ದದಿಂದ ಅವುಗಳು ಹೆದರಿ ಓಡಿ ಹೋಗುವ ಸಾಧ್ಯತೆ ಇರುತ್ತದೆ.

Most Read

error: Content is protected !!