ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಸಂತಸ ತಂದಿದೆ. ಸಮೃದ್ಧಿಯ ಸಂಕೇತವಾದ ಈ ಹಬ್ಬದಂದು ರೈತರು ಬೆಳೆದ ಬೆಳೆಯ ಪೈರನ್ನು ತಂದು ಪೂಜೆ ಸಲ್ಲಿಸುತ್ತಾರೆ. ಈ ಹಬ್ಬವು ಋತುವಿನ ಬದಲಾವಣೆಯನ್ನು ಸೂಚಿಸುತ್ತದೆ, ಈ ದಿನದಿಂದ ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣ ಗೋಳಾರ್ಧದವರೆಗೆ ತನ್ನ ಚಲನೆಯನ್ನು ಪ್ರಾರಂಭಿಸುತ್ತಾನೆ ಮತ್ತು ಇದು ಚಳಿಗಾಲದ ಅಧಿಕೃತ ಅಂತ್ಯವನ್ನು ಸೂಚಿಸುತ್ತದೆ. ಎಳ್ಳು ಬೆಲ್ಲವ ತಿಂದು ಒಳ್ಳೆಯ ಮಾತನಾಡೋಣ ಎನ್ನುತ್ತಲೇ ಎಲ್ಲರೂ ಮಕರ ಸಂಕ್ರಾಂತಿ ಹಬ್ಬವನ್ನು ಸ್ವಾಗತಿಸುತ್ತಾರೆ.
ಈ ಸಂಕ್ರಾಂತಿ ಸಂಭ್ರಮದ ದಿನದಂದು ಗಾಳಿಪಟ ಹಾರಿಸುವುದು ಒಂದು ಸಂಪ್ರದಾಯ. ಸಂಕ್ರಾಂತಿ ದಿನದಂದು ಗಾಳಿಪಟ ಏಕೆ ಹಾರಿಸುತ್ತಾರೆ?
ಮಕರ ಸಂಕ್ರಾಂತಿ ದಿನದಂದು ಮಕ್ಕಳು, ಯುವಕ-ಯುವತಿಯರು, ವಯಸ್ಕರರೂ ಸಹ ಬಣ್ಣ ಬಣ್ಣದ ಗಾಳಿಪಟ ಹಾರಿಸಿ ಸಂಭ್ರಮಿಸುತ್ತಾರೆ. ಈ ಹಬ್ಬವು ಸುಗ್ಗಿಯ ಋತುವಿನ ಅಗಮನದೊಂದಿಗೆ ಚಳಿಗಾಲದ ಅಂತ್ಯವನ್ನೂ ಸಂಕೇತಿಸುತ್ತದೆ. ಚಳಿಗಾಲದಲ್ಲಿ ಸಾಕಷ್ಟು ಸೂಕ್ಷ್ಮಾಣುಗಳು ಉತ್ಪತ್ತಿಯಾಗುವುದರಿಂದ ರೋಗ-ರುಜುನಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದಲೇ ಚಳಿಗಾಲದಲ್ಲಿ ಹೆಚ್ಚಿನ ಜನರು, ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿ, ಆಸ್ಪತ್ರೆಗಳಿಗೆ ಅಲೆದಾಡುತ್ತಿರುವುದು ಕಂಡುಬರುತ್ತದೆ.
ಮಕರ ಸಂಕ್ರಾಂತಿಯ ಸಮಯದಲ್ಲಿ ಮುಂಜಾನೆ ಸೂರ್ಯನ ಕಿರಣಗಳು ದೇಹದ ಮೇಲೆ ಬೀಳುವುದರಿಂದ ಬ್ಯಾಕ್ಟೀರಿಯಾಗಳು ನೈಸರ್ಗಿಕವಾಗಿಯೇ ನಾಶವಾಗುತ್ತವೆ. ಜೊತೆಗೆ ದೇಹಕ್ಕೆ ವಿಟಮಿನ್ ಡಿ ದೊರಕುವುದರಿಂದ, ಇದು ಚರ್ಮದ ಸಮಸ್ಯೆ ನಿವಾರಣೆಗೂ ನೆರವಾಗುತ್ತದೆ. ಇದೇ ಕಾರಣಕ್ಕೆ ಸಂಕ್ರಾಂತಿಯ ದಿನ ಹಾಗೂ ಉತ್ತರಾಯಣ ಋತುವಿನ ಕಾಲದಲ್ಲಿ ಹೆಚ್ಚಾಗಿ ಗಾಳಿಪಟವನ್ನು ಹಾರಿಸಲಾಗುತ್ತದೆ ಎಂಬ ನಂಬಿಕೆ.
ತ್ರೇತಾಯುಗದಲ್ಲಿ ಮಕರ ಸಂಕ್ರಾಂತಿಯ ದಿನದಂದು ಭಗವಾನ್ ರಾಮ ತನ್ನ ಸಹೋದರರು ಮತ್ತು ಹನುಮಂತನೊಂದಿಗೆ ಗಾಳಿಪಟವನ್ನು ಹಾರಿಸುತ್ತಿದ್ದರು ಎನ್ನುವ ನಂಬಿಕೆಯಿದೆ. ಹೀಗಾಗಿ, ಅಂದಿನಿಂದ ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವ ಸಂಪ್ರದಾಯ ಪ್ರಾರಂಭವಾಯಿತು ಎನ್ನಲಾಗುತ್ತದೆ. ಇನ್ನು ಗಾಳಿಪಟ ಹಾರಿಸಿದರೆ ಅದು ಸ್ವರ್ಗಕ್ಕೆ ಸೇರುತ್ತದೆ ಎನ್ನುವ ನಂಬಿಕೆಯೂ ಇದೆ.


