ಹಿಂದು ಸಂಪ್ರದಾಯದಲ್ಲಿ ವಾರದ ಪ್ರತಿಯೊಂದು ದಿನಕ್ಕೂ ಒಂದೊಂದು ಗ್ರಹ ಮತ್ತು ದೇವರಿಗೆ ಸಂಬಂಧಿಸಿದೆ. ಈ ದಿನಗಳು ಕೇವಲ ಕ್ಯಾಲೆಂಡರ್ ಪುಟಗಳಲ್ಲ, ಜೀವನದ ನಡೆ-ನುಡಿಗೆ ಪರಿಣಾಮ ಬೀರುವ ಶಕ್ತಿಗಳು ಎಂದು ನಂಬಲಾಗುತ್ತದೆ. ಮಂಗಳವಾರ ಮಂಗಳ ಗ್ರಹ ಮತ್ತು ಭಗವಂತ ಹನುಮಂತನಿಗೆ ಸಮರ್ಪಿತವಾದ ವಿಶೇಷ ದಿನ. ಜ್ಯೋತಿಷ್ಯ ಪ್ರಕಾರ ಈ ದಿನ ಹಣಕಾಸಿನ ವ್ಯವಹಾರಗಳಲ್ಲಿ ಜಾಗ್ರತೆ ಅವಶ್ಯಕ. ವಿಶೇಷವಾಗಿ “ಸಾಲ ಕೊಡೋದು–ಸಾಲ ತೆಗೆದುಕೊಳ್ಳೋದು” ಅಶುಭ ಎಂದು ಪರಿಗಣಿಸುವ ನಂಬಿಕೆ ಹಳೆ ಕಾಲದಿಂದ ನಡೆದು ಬಂದಿದೆ.
ಮಂಗಳವಾರ ಸಾಲದ ವ್ಯವಹಾರಗಳನ್ನು ಏಕೆ ತಪ್ಪಿಸಬೇಕು?
ಮಂಗಳ ಗ್ರಹವನ್ನು ಜ್ಯೋತಿಷ್ಯದಲ್ಲಿ ಅಗ್ನಿಯ ತೇಜಸ್ಸು, ಧೈರ್ಯ ಮತ್ತು ಯುದ್ಧದ ಸಂಕೇತವಾಗಿ ನೋಡುತ್ತಾರೆ. ಈ ಕಾರಣದಿಂದ ಮಂಗಳವಾರ ತೆಗೆದುಕೊಳ್ಳುವ ಸಾಲ “ಅಗ್ನಿ ಸಾಲ”ವೆಂದು ಪರಿಗಣಿಸಲಾಗುತ್ತದೆ. ಇದು ಬೇಗನೆ ಹೆಚ್ಚುವ, ತೀರಿಸಲು ಕಷ್ಟವಾಗುವ, ವ್ಯಕ್ತಿಯನ್ನು ಸಾಲದ ಚಕ್ರದಲ್ಲಿ ಸಿಲುಕಿಸುವ ಶಕ್ತಿಯನ್ನೂ ಹೊಂದಿದೆ ಎಂದು ನಂಬಿಕೆ. ಹೀಗಾಗಿ ಈ ದಿನ ಹಣಕಾಸು ವಹಿವಾಟುಗಳನ್ನು ತಪ್ಪಿಸುವುದು ಶುಭವೆಂದು ಸಂಪ್ರದಾಯ ಹೇಳುತ್ತದೆ.
ಧಾರ್ಮಿಕ ನಂಬಿಕೆಯ ಪಾತ್ರ
ಮಂಗಳವಾರ ಹನುಮಂತನ ಆರಾಧನೆಗೆ ಅತ್ಯಂತ ಶುಭದ ದಿನ. ಈ ದಿನ ಹನುಮಂತನಿಗೆ ಸಿಂಧೂರಾರ್ಚನೆ, ಸುಂದರಕಾಂಡ ಪಾರಾಯಣ ಮಾಡಿದರೆ ಜೀವನದ ಕಷ್ಟಗಳು, ವಿಶೇಷವಾಗಿ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆ ಜನಪ್ರಿಯವಾಗಿದೆ. ಹೀಗಾಗಿ ಈ ದಿನ ಸಾಲ ತೆಗೆದುಕೊಳ್ಳುವುದನ್ನು ಧಾರ್ಮಿಕ ಕಾರಣಗಳಿಂದಲೂ ತಪ್ಪಿಸಬೇಕು ಎಂದು ಹೇಳಲಾಗುತ್ತದೆ.
ಸಾಲ ತೀರಿಸಲು ಮಾತ್ರ ಶುಭ
ಮಂಗಳವಾರ ಹೊಸ ಸಾಲ ಪಡೆಯುವುದು ಅಶುಭವಾದರೂ, ಹಳೆಯ ಸಾಲ ತೀರಿಸಲು ಇದು ಅತ್ಯಂತ ಉತ್ತಮ ದಿನವೆಂದು ಗ್ರಂಥಗಳು ಹೇಳುತ್ತವೆ. ಈ ದಿನ ಮೊದಲ ಕಂತು ಪಾವತಿಸಿದರೆ ಸಾಲ ಬೇಗ ಕಡಿಮೆಯಾಗುತ್ತೆ ಎಂದು ನಂಬಲಾಗುತ್ತದೆ.
ಈ ನಂಬಿಕೆಗಳು ವೈಜ್ಞಾನಿಕವಾಗಿ ಸಾಬೀತಾಗಿಲ್ಲದಿದ್ದರೂ, ಸಂಪ್ರದಾಯ, ಜ್ಯೋತಿಷ್ಯ ಮತ್ತು ಧಾರ್ಮಿಕ ಭಾವನೆಗಳಿಂದ ಪ್ರೇರಿತವಾಗಿವೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

