ಡಿಸೆಂಬರ್ ಅಂದಾಗ ಮೊದಲು ನೆನಪಾಗೋದು ಕ್ರಿಸ್ಮಸ್ ಹಬ್ಬ. ಆ ಸಂಭ್ರಮದ ಕೇಂದ್ರಬಿಂದುವಾಗಿರುವ ವ್ಯಕ್ತಿ ಸಾಂತಾ ಕ್ಲಾಸ್. ಬಿಳಿ ಗಡ್ಡ, ನಗುಮುಖ ಮತ್ತು ಕೆಂಪು ಬಣ್ಣದ ಉಡುಪು. ಈ ರೂಪವೇ ಸಾಂತಾ ಕ್ಲಾಸ್‌ಗೆ ಶಾಶ್ವತ ಗುರುತಾಗಿ ಬಿಟ್ಟಿದೆ. ಆದರೆ ಸಾಂತಾ ಕ್ಲಾಸ್ ಎಂದರೆ ಕೆಂಪು ಬಟ್ಟೆ ಅನ್ನೋ ಕಲ್ಪನೆ ಹೇಗೆ ಹುಟ್ಟಿತು ಎಂಬ ಪ್ರಶ್ನೆ ಹಲವರಲ್ಲಿ ಮೂಡಿರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ ಕೇಳಿ.
ಸಾಂತಾ ಕ್ಲಾಸ್ ಪಾತ್ರಕ್ಕೆ ಮೂಲವಾದವರು ನಾಲ್ಕನೇ ಶತಮಾನದ ಸಂತ ನಿಕೋಲಸ್. ಈತ ಜನರಿಗೆ ಸಹಾಯ ಮಾಡುವುದರಲ್ಲೇ ಸಂತೋಷ ಅನುಭವಿಸುತ್ತಿದ್ದ. ಮಕ್ಕಳು ದು:ಖದಲ್ಲಿದ್ದರೆ ವಿಶೇಷವಾದ ಉಡುಪು ತೊಟ್ಟು ಅವರಿಗೆ ಉಡುಗೊರೆಗಳನ್ನು ನೀಡುತ್ತಿದ್ದ. ಇವರ ಕಾರಣದಿಂದಲೇ ಸಾಂತಾ ಕ್ಲಾಸ್ ಪಾತ್ರ ಆರಂಭವಾಯಿತು ಎನ್ನಲಾಗುತ್ತದೆ.
ಆರಂಭಿಕ ಕಾಲದ ಚಿತ್ರಗಳು ಮತ್ತು ಕಥೆಗಳಲ್ಲಿ ಸಾಂತಾ ವಿಭಿನ್ನ ಬಣ್ಣದ ಉಡುಪಿನಲ್ಲಿ ಕಾಣಿಸುತ್ತಿದ್ದನು. ಕೆಲವೊಮ್ಮೆ ಹಸಿರು, ನೀಲಿ ಅಥವಾ ಕಂದು ಬಣ್ಣದ ವೇಷವೂ ಬಳಸಲಾಗುತ್ತಿತ್ತು. ಅಂದರೆ, ಆರಂಭದಲ್ಲಿ ಕೆಂಪು ಬಣ್ಣವೇ ಅಂತಿಮ ಆಯ್ಕೆ ಆಗಿರಲಿಲ್ಲ.
19ನೇ ಶತಮಾನದಲ್ಲಿ ಸಾಂತಾ ಕ್ಲಾಸ್ ಕುರಿತ ಚಿತ್ರಣಗಳು ಜನಪ್ರಿಯವಾಗತೊಡಗಿದಂತೆ, ಕೆಂಪು ಬಣ್ಣಕ್ಕೆ ಹೆಚ್ಚಿನ ಒತ್ತು ದೊರಕಿತು. ಕೆಂಪು ಬಣ್ಣವು ಪ್ರೀತಿ ಮತ್ತು ಹಬ್ಬದ ಸಂಭ್ರಮವನ್ನು ಸೂಚಿಸುವುದರಿಂದ, ಚಳಿಗಾಲದ ಹಬ್ಬಕ್ಕೆ ಇದು ಸೂಕ್ತ ಬಣ್ಣವಾಗಿ ಜನರ ಮನಸ್ಸಿಗೆ ಹತ್ತಿರವಾಯಿತು.
ಆದರೆ ಸಾಂತಾ ಕ್ಲಾಸ್‌ನ ಇಂದಿನ ರೂಪವನ್ನು ಜಗತ್ತಿಗೆ ಪರಿಚಯಿಸಿದ್ದು 1930ರ ದಶಕದ ಕೋಕಾಕೋಲಾ ಜಾಹೀರಾತುಗಳು. ಕೆಂಪು–ಬಿಳಿ ವೇಷದಲ್ಲಿನ ಸಾಂತಾ ಚಿತ್ರಣ ಜಾಗತಿಕವಾಗಿ ಪ್ರಸಾರವಾಗಿ, ಅದೇ ರೂಪ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚಳಿಯಿತು.

