ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಟಿ20 ತಂಡದ ಉಪನಾಯಕ ಶುಭ್ಮನ್ ಗಿಲ್ ಅವರನ್ನು ಆಡುವ ಬಳಗದಿಂದ ಕೈ ಬಿಡಬೇಕೇ? ಸದ್ಯಕ್ಕೆ ಕ್ರಿಕೆಟ್ ವಲಯದಲ್ಲಿ ಮನೆ ಮಾಡಿರುವ ಅತಿದೊಡ್ಡ ಪ್ರಶ್ನೆ ಇದು. ಸತತ ವೈಫಲ್ಯ ಅನುಭವಿಸುತ್ತಿದ್ದರೂ, ಗಿಲ್ ತಂಡದಲ್ಲಿ ಮುಂದುವರೆದಿರುವುದು ಅವರ ‘ಉಪನಾಯಕನ ಪಟ್ಟ’ದಿಂದಾಗಿ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ತಂಡದ ನಾಯಕನಿಗಿಂತ ಉಪನಾಯಕನ ಉಪಸ್ಥಿತಿ ಅನಿವಾರ್ಯವಲ್ಲ. ಆದ್ದರಿಂದ ಗಿಲ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಟ್ಟರೂ ಯಾವುದೇ ಸಮಸ್ಯೆ ಇಲ್ಲ.
ಗಿಲ್ ಅವರನ್ನು ಕೈಬಿಡಲು ಹಿಂದಿನ ಉದಾಹರಣೆಗಳು ಸಾಕ್ಷಿ ಒದಗಿಸುತ್ತವೆ:
2002-2003: ವಿವಿಎಸ್ ಲಕ್ಷ್ಮಣ್ – ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ಲಕ್ಷ್ಮಣ್, ಆಗಿನ ಭಾರತ ತಂಡದ ಉಪನಾಯಕನಾಗಿದ್ದರೂ, ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಿಂದ ಕೈಬಿಡಲಾಗಿತ್ತು. ಅವರ ಸ್ಥಾನಕ್ಕೆ ಮೊಹಮ್ಮದ್ ಕೈಫ್ ಅವಕಾಶ ಪಡೆದಿದ್ದರು.
2018-2019: ಅಜಿಂಕ್ಯ ರಹಾನೆ – ಟೆಸ್ಟ್ ತಂಡದ ಉಪನಾಯಕರಾಗಿದ್ದರೂ, ಕಳಪೆ ಫಾರ್ಮ್ ಕಾರಣ ರಹಾನೆ ಅವರನ್ನು ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿತ್ತು. ರೋಹಿತ್ ಶರ್ಮಾ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದರು.
2023: ಕೆಎಲ್ ರಾಹುಲ್ – ಕಳಪೆ ಫಾರ್ಮ್‌ಗಾಗಿ ರಾಹುಲ್ ಅವರನ್ನು ಉಪನಾಯಕ ಸ್ಥಾನದಿಂದ ಕೆಳಗಿಳಿಸಲಾಯಿತು ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿತ್ತು. ಗಮನಾರ್ಹವೆಂದರೆ, ರಾಹುಲ್ ಬದಲಿಗೆ ಶುಭ್ಮನ್ ಗಿಲ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆದಿದ್ದರು.
ಹೀಗಾಗಿ, ಉಪನಾಯಕನ ಸ್ಥಾನ ಕಳಪೆ ಪ್ರದರ್ಶನದ ಮುಂದೆ ಗೌಣ ಎಂಬುದಕ್ಕೆ ಈ ಉದಾಹರಣೆಗಳು ಸ್ಪಷ್ಟೀಕರಣ ನೀಡುತ್ತವೆ. ಪ್ರಸ್ತುತ ಫಾರ್ಮ್ ಆಧಾರದ ಮೇಲೆ ಗಿಲ್ ಅವರನ್ನು ಕೈಬಿಡುವುದು ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯವಾಗಿದೆ.
ಕಳೆದ 14 ಟಿ20 ಪಂದ್ಯಗಳಲ್ಲಿ ಶುಭ್ಮನ್ ಗಿಲ್ ಒಂದೇ ಒಂದು ಅರ್ಧಶತಕ ಗಳಿಸಿಲ್ಲ. ಅವರ ಇತ್ತೀಚಿನ ಸ್ಕೋರ್‌ಗಳು ಹೀಗಿವೆ: 20(9), 10(7), 5(11), 47(28), 29(19), 4(3), 12(10), 37*(20), 5(10), 15(12), 46(40), 29(16), 4(2). ಅದರಲ್ಲೂ ಕಳೆದ ಪಂದ್ಯದಲ್ಲಿ ಅವರು ಶೂನ್ಯಕ್ಕೆ ಔಟಾಗಿದ್ದರು.
ಸತತ ವೈಫಲ್ಯಗಳ ನಡುವೆಯೂ ಗಿಲ್ ಅವರನ್ನು ‘ವೈಸ್ ಕ್ಯಾಪ್ಟನ್ ಕಾರ್ಡ್’ ಬಳಸಿ ಕಣಕ್ಕಿಳಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಗಿಲ್‌ಗೆ ಅವಕಾಶ ನೀಡುತ್ತಿರುವುದರಿಂದ ಪ್ರತಿಭಾನ್ವಿತ ಸಂಜು ಸ್ಯಾಮ್ಸನ್ ಅವಕಾಶ ವಂಚಿತರಾಗಿದ್ದಾರೆ. ಮೊಹಮ್ಮದ್ ಕೈಫ್, ರಾಬಿನ್ ಉತ್ತಪ್ಪ, ಇರ್ಫಾನ್ ಪಠಾಣ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಈ ವಿಚಾರವಾಗಿ ಧ್ವನಿಯೆತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಸೌತ್ ಆಫ್ರಿಕಾ ವಿರುದ್ಧದ ಮೂರನೇ ಮತ್ತು ನಿರ್ಣಾಯಕ ಟಿ20 ಪಂದ್ಯದಿಂದ ಶುಭ್ಮನ್ ಗಿಲ್ ಅವರನ್ನು ಕೈಬಿಟ್ಟು, ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡುವ ಕಠಿಣ ನಿರ್ಧಾರವನ್ನು ಟೀಮ್ ಇಂಡಿಯಾ ತೆಗೆದುಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕು.

