Wednesday, November 26, 2025

ಈ ದಿನವೇ ರಾಮ ಮಂದಿರದ ಧ್ವಜಾರೋಹಣ ಮಾಡುತ್ತಿರುವ ಕಾರಣ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಯೋಧ್ಯೆಯ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು(ನ.25) ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಗೆ ಆಗಮಿಸಿದ್ದು, ದೇವಾಲಯದ ಶಿಖರದ ಮೇಲೆ 10 ಅಡಿ ಎತ್ತರದ ಪವಿತ್ರ ಕೇಸರಿ ಧ್ವಜವನ್ನು ಹಾರಿಸಲಿದ್ದಾರೆ. ಈ ಐತಿಹಾಸಿಕ ಧ್ವಜಾರೋಹಣ ಸಮಾರಂಭವು ವಿವಾಹ ಪಂಚಮಿಯ ಶುಭ ಸಂದರ್ಭದಲ್ಲಿ ನಡೆಯುತ್ತಿರುವುದು ಮತ್ತೊಂದು ವಿಶೇಷ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ರಾಮ ಮಂದಿರದ ಧ್ವಜಾರೋಹಣ ಸಮಾರಂಭವು ವಿವಾಹ ಪಂಚಮಿಯ ಶುಭ ಸಂದರ್ಭದಲ್ಲಿ ನಡೆಸುವುದರ ಹಿಂದೆ ಹಲವು ಕಾರಣಗಳಿವೆ. ಯಾಕೆಂದರೆ ಭಗವಾನ್ ಶ್ರೀ ರಾಮಚಂದ್ರ ಮತ್ತು ಮಾತೆ ಸೀತಾ ದೇವಿಯ ವಿವಾಹದ ಪವಿತ್ರ ದಿನವನ್ನೇ ವಿವಾಹ ಪಂಚಮಿಯಾಗಿ ಆಚರಿಸಲಾಗುತ್ತದೆ. ಮಾರ್ಗಶಿರ ಮಾಸದ ಐದನೇ ದಿನವಾದು ಇಂದು ಶ್ರೀ ರಾಮನು ಜನಕಮಹಾರಾಜನ ಮಗಳಾದ ಜಾನಕಿಯನ್ನು ವಿವಾಹವಾದರು. ಆದ್ದರಿಂದಲೇ ಈ ಶುಭ ದಿನದಂದು ಅಯೋಧ್ಯೆಯಲ್ಲಿ ಧ್ವಜಾರೋಹಣ ಸಮಾರಂಭವನ್ನು ನಡೆಸಲಾಗುತ್ತಿದೆ. ಇದಲ್ಲದೇ ಅಯೋಧ್ಯೆಯಲ್ಲಿ 48 ಗಂಟೆಗಳ ಕಾಲ ಅಖಂಡ ತಪಸ್ಸು ಕೈಗೊಂಡ ಸಿಖ್‌ ಗುರು ತೇಗಬಹದ್ದೂರರ ಬಲಿದಾನ ದಿನವೂ ಇವತ್ತೇ ಬಂದಿರುವುದು ಮತ್ತೊಂದು ವಿಶೇಷ.

ಕ್ಯಾಲೆಂಡರ್ ಪ್ರಕಾರ, ನವೆಂಬರ್ 25 ರಂದು ಅಯೋಧ್ಯೆ ದೇವಸ್ಥಾನದಲ್ಲಿ ಧ್ವಜಾರೋಹಣ ಸಮಾರಂಭವು ಅಭಿಜಿತ್ ಮುಹೂರ್ತದ ಸಮಯದಲ್ಲಿ ನಡೆಯಲಿದೆ, ಇಂದು ಬೆಳಿಗ್ಗೆ 11:45 ರಿಂದ ಮಧ್ಯಾಹ್ನ 12:29 ರವರೆಗೆ ಇರುತ್ತದೆ. ಈ ಅಭಿಜಿತ್ ಮುಹೂರ್ತದ ಸಮಯದಲ್ಲಿಯೇ ರಾಮ ಜನಿಸಿದನೆಂಬ ನಂಬಿಕೆಯೂ ಇದೆ, ಆದ್ದರಿಂದ ರಾಮ ದೇವಾಲಯದಲ್ಲಿ ಧ್ವಜಾರೋಹಣ ಸಮಾರಂಭಕ್ಕೆ ಈ ಸಮಯವನ್ನು ನಿಗದಿಪಡಿಸಲಾಗಿದೆ.

error: Content is protected !!