April 1, 2026
Wednesday, April 1, 2026
spot_img

ಇರಾನ್ ನಾಯಕನಿಗೆ ಇಲ್ಲಿ ಗೌರವವೇಕೆ? ಕಲಬುರಗಿ ಪಾಲಿಕೆ ನಡವಳಿಕೆಗೆ ಸಿದ್ದಲಿಂಗ ಸ್ವಾಮೀಜಿ ತೀವ್ರ ಖಂಡನೆ

ಹೊಸದಿಗಂತ ಕಲಬುರಗಿ:

ಮಹಾನಗರ ಪಾಲಿಕೆಯ 2025-26ನೇ ಸಾಲಿನ ಬಜೆಟ್ ಮಂಡನೆ ಸಭೆಯು ಈಗ ದೊಡ್ಡ ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ. ಇರಾನ್‌ನ ಸರ್ವೋಚ್ಚ ನಾಯಕ ಆಯಾತುಲ್ಲ ಖಮೇನಿ ನಿಧನಕ್ಕೆ ಪಾಲಿಕೆಯಲ್ಲಿ ಸಂತಾಪ ಸೂಚಿಸಿರುವುದನ್ನು ಶಿವಸೇನಾ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ.

ಮಂಗಳವಾರ ನಡೆದ ಪಾಲಿಕೆಯ ಮುಂಗಡ ಪತ್ರ ಮಂಡನೆ ಸಭೆಗೂ ಮುನ್ನ, 24ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಸೈಯದ್ ನೂರ ಫಾತಿಮಾ ಅವರು ಇರಾನ್ ನಾಯಕ ಖಮೇನಿ ನಿಧನಕ್ಕೆ ಮೌನಾಚರಣೆ ಮಾಡಲು ಪ್ರಸ್ತಾಪಿಸಿದ್ದರು. ಈ ವೇಳೆ ಪಾಲಿಕೆ ಕಮಿಷನರ್ ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಸದಸ್ಯರೆಲ್ಲರೂ ಎದ್ದು ನಿಂತು ಸಂತಾಪ ಸೂಚಿಸಿದ್ದರು.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಈ ನಡೆಯನ್ನು ‘ಮಾನವ ಕುಲಕ್ಕೆ ಅವಮಾನ’ ಎಂದು ಕರೆದರು.

“ಇರಾನ್ ನಾಗರಿಕರೇ ಖಮೇನಿ ಸಾವಿಗೆ ವಿರೋಧ ವ್ಯಕ್ತಪಡಿಸಿಲ್ಲ ಮತ್ತು ಯಾವುದೇ ಮುಸ್ಲಿಂ ರಾಷ್ಟ್ರಗಳು ಈ ಬಗ್ಗೆ ಮಾತನಾಡುತ್ತಿಲ್ಲ. ಹೀಗಿರುವಾಗ ಕಲಬುರಗಿಯ ಸರ್ಕಾರಿ ಕಚೇರಿಯಲ್ಲಿ ಅವರಿಗೆ ಗುಣಗಾನ ಮಾಡಿದ್ದೇಕೆ?” ಎಂದು ಪ್ರಶ್ನಿಸಿದರು.

ರಾಷ್ಟ್ರಕ್ಕೆ ಸಂಬಂಧಪಡದ ವ್ಯಕ್ತಿಗೆ ಸಂತಾಪ ಸೂಚಿಸಿದವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈ ವಿಚಾರದಲ್ಲಿ ಪ್ರತಿಪಕ್ಷ ಬಿಜೆಪಿಯ ನಡೆಯನ್ನು ಶ್ರೀಗಳು ತೀವ್ರವಾಗಿ ಟೀಕಿಸಿದರು. “ದೇಶದ ಸಂಸತ್ತಿನಲ್ಲಾಗಲಿ ಅಥವಾ ರಾಜ್ಯದ ವಿಧಾನಸಭೆಯಲ್ಲಾಗಲಿ ನಡೆಯದ ಇಂತಹ ನಾಚಿಕೆಗೇಡಿನ ಘಟನೆಗೆ ಬಿಜೆಪಿ ಸಾಕ್ಷಿಯಾಗಿದೆ. ಪಾಲಿಕೆಯ ಈ ನಡೆಯನ್ನು ವಿರೋಧಿಸಿ ಹೊರಬಂದು ಪ್ರತಿಭಟಿಸುವ ಬದಲು, ಬಿಜೆಪಿ ಸದಸ್ಯರು ಮೌನಕ್ಕೆ ಶರಣಾಗಿರುವುದು ಅವರ ‘ಶಕ್ತಿಹೀನತೆ’ಯನ್ನು ತೋರಿಸುತ್ತದೆ,” ಎಂದು ಕಿಡಿಕಾರಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !