Friday, December 12, 2025

ಉಚಿತ ಬಸ್ ಮಾಡಿದವರಿಗೆ ಜನೌಷಧಿ ಇಡಲು ಅಡ್ಡಿ ಏಕೆ?: ಸರ್ಕಾರಕ್ಕೆ ಧಾರವಾಡ ಹೈಕೋರ್ಟ್ ತರಾಟೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಹೊರಡಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ಭಾರೀ ಹಿನ್ನಡೆ ನೀಡಿದೆ. ಈ ಸಂಬಂಧದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ರಾಜ್ಯ ಸರ್ಕಾರದ ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.

ಜನೌಷಧಿ ಅಂಗಡಿಗಳ ಗುತ್ತಿಗೆ ಅವಧಿ ಮುಗಿದ ಕಾರಣ, ಅವರಿಗೆ ಆಸ್ಪತ್ರೆ ಆವರಣದಿಂದ ಹೊರಗೆ ಅಂಗಡಿ ಇಡಲು ಸೂಚಿಸಲಾಗಿತ್ತು ಎಂದು ಸರ್ಕಾರಿ ವಕೀಲರು ವಾದ ಮಂಡಿಸಿದ್ದರು. ಇದಕ್ಕೆ ಪ್ರತಿಯಾಗಿ ಅರ್ಜಿದಾರರ ಪರ ವಕೀಲರು, ಜನೌಷಧಿ ಕೇಂದ್ರಗಳಲ್ಲಿ ಬಡವರು ಕಡಿಮೆ ಬೆಲೆಗೆ ಔಷಧಿಗಳನ್ನು ಪಡೆಯುತ್ತಿದ್ದು, ಈ ಆದೇಶ ರದ್ದುಗೊಳಿಸಬೇಕು ಎಂದು ಪ್ರಬಲ ವಾದ ಮಂಡಿಸಿದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯವು ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ನ್ಯಾಯಾಲಯವು, “ಕೇವಲ 120 ಚದರ ಅಡಿ ಜಾಗದಲ್ಲಿ ಜನೌಷಧಿ ಕೇಂದ್ರ ಇಟ್ಟುಕೊಂಡು ಬಡವರಿಗೆ ಕಡಿಮೆ ಹಣದಲ್ಲಿ ಔಷಧಿ ನೀಡಿದರೆ ಸರ್ಕಾರಕ್ಕೆ ಏನು ಸಮಸ್ಯೆ? ಈ ಬಗ್ಗೆ ಯಾರಾದರೂ ದೂರು ನೀಡಿದ್ದಾರೆಯೇ?” ಎಂದು ಪ್ರಶ್ನಿಸಿತು.

ಬಸ್ ಉಚಿತ ಮಾಡುವ ನಿರ್ಧಾರವನ್ನು ಸರ್ಕಾರಕ್ಕೆ ಯಾರೂ ಹೇಳಿರಲಿಲ್ಲ, ಆದರೂ ಅದನ್ನು ಜಾರಿಗೆ ತಂದಿದ್ದೀರಿ ಎಂದು ನೆನಪಿಸಿದ ನ್ಯಾಯಾಲಯ, ಜನೌಷಧಿ ಕೇಂದ್ರಗಳ ಮುಚ್ಚುವ ನಿರ್ಧಾರದ ಮೂಲಕ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

“ಈ ಪ್ರಕರಣ ನ್ಯಾಯಾಲಯಕ್ಕೆ ಬರುವ ಅಗತ್ಯವೇ ಇರಲಿಲ್ಲ. ಜನೌಷಧಿ ಅಂಗಡಿಗೆ ಅವಕಾಶ ನೀಡದೇ ಇದ್ದರೆ ಜನರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಕಾಣುತ್ತದೆ,” ಎಂದು ನ್ಯಾಯಾಲಯ ಖಂಡಾತುಂಡವಾಗಿ ಅಭಿಪ್ರಾಯಪಟ್ಟು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶವನ್ನು ರದ್ದುಗೊಳಿಸಿತು.

ಬಡವರು ಮತ್ತು ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಒದಗಿಸುತ್ತಿದ್ದ ಈ ಕೇಂದ್ರಗಳು ಸ್ಥಗಿತಗೊಂಡರೆ ತೀವ್ರ ತೊಂದರೆಯಾಗಲಿದೆ ಎಂದು ರಾಜ್ಯಾದ್ಯಂತ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ, ಹೈಕೋರ್ಟ್‌ನ ಈ ತೀರ್ಪು ಜನಸಾಮಾನ್ಯರಿಗೆ ದೊಡ್ಡ ರಿಲೀಫ್ ನೀಡಿದಂತಾಗಿದೆ.

error: Content is protected !!