ಪ್ರತಿ ದಿನದ ಬೆಳಗ್ಗೆ ಮನೆ ಮುಂದೆ ಮೂಡುವ ರಂಗೋಲಿ ಕೇವಲ ಅಲಂಕಾರವಲ್ಲ. ಅದು ನಮ್ಮ ಜೀವನ ಶೈಲಿ, ನಂಬಿಕೆ, ಆರೋಗ್ಯ ಮತ್ತು ಸಂಸ್ಕೃತಿಯನ್ನು ಒಟ್ಟಿಗೆ ಕಟ್ಟುವ ಸಂಪ್ರದಾಯ. ಹೆಣ್ಣುಮಕ್ಕಳು ಸೂರ್ಯೋದಯಕ್ಕೂ ಮೊದಲು ಬಾಗಿಲು ಮುಂದೆ ನಿಂತು ರಂಗೋಲಿ ಹಾಕುವ ದೃಶ್ಯದಲ್ಲಿ ಅರ್ಥಕ್ಕಿಂತ ಹೆಚ್ಚು ಭಾವ ಅಡಗಿದೆ. ಕಾಲ ಬದಲಾಗುತ್ತಿದ್ದರೂ ಈ ಪದ್ಧತಿ ಇನ್ನೂ ಜೀವಂತವಾಗಿರುವುದಕ್ಕೆ ಹಲವು ಕಾರಣಗಳಿವೆ.
ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕ: ರಂಗೋಲಿ ಮನೆಗೆ ಶುಭವನ್ನು ಆಹ್ವಾನಿಸುವ ಸಂಕೇತ. ಭಾರತೀಯ ಸಂಸ್ಕೃತಿಯಲ್ಲಿ ಅದು ಸಕಾರಾತ್ಮಕ ಶಕ್ತಿಯ ಪ್ರತಿಬಿಂಬ.
ಶುದ್ಧತೆ ಮತ್ತು ಸ್ವಚ್ಛತೆ: ರಂಗೋಲಿ ಹಾಕುವ ಮುನ್ನ ಮನೆ ಮುಂದೆ ನೀರು ಸಿಂಪಡಿಸಲಾಗುತ್ತದೆ. ಇನ್ನು ಕೆಲವು ಕಡೆ ಸೆಗಣಿ ನೀರಿನಿಂದ ನೆಲ ಸರಿಸಲಾಗುತ್ತದೆ ಇದರಿಂದ ಪರಿಸರ ಸ್ವಚ್ಛವಾಗುತ್ತದೆ.
ಮಾನಸಿಕ ಶಾಂತಿ: ಬೆಳಗಿನ ಶಾಂತ ವಾತಾವರಣದಲ್ಲಿ ರಂಗೋಲಿ ಹಾಕುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ, ಧ್ಯಾನದಂತೆಯೇ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ: ದಾಖಲೆ ಬರೆದ ಭಕ್ತ ಸಮೂಹ, ಮಹಾದಾಸೋಹಕ್ಕೆ ಹರಿದು ಬಂದ ಆಹಾರ ಪದಾರ್ಥ
ಪ್ರಕೃತಿಯೊಂದಿಗೆ ಸಂಪರ್ಕ: ರಂಗೋಲಿ ಪುಡಿ ಬದಲು ಹಳೆ ಕಾಲದಲ್ಲಿ ಅಕ್ಕಿ ಹಿಟ್ಟು ಬಳಕೆಮಾಡುತ್ತಿದ್ದರು. ಇದರಿಂದ ಚಿಟ್ಟೆ, ಹಕ್ಕಿಗಳಿಗೆ ಆಹಾರ ಸಿಗುವಂತಾಗುತ್ತಿತ್ತು.
ಸ್ತ್ರೀಶಕ್ತಿಯ ಅಭಿವ್ಯಕ್ತಿ: ರಂಗೋಲಿ ಹೆಣ್ಣುಮಕ್ಕಳ ಸೃಜನಶೀಲತೆಯ ಸಂಕೇತ. ಕಲೆಯ ಮೂಲಕ ತಮ್ಮ ಭಾವನೆ ವ್ಯಕ್ತಪಡಿಸುವ ಮಾರ್ಗ ಎಂದರೂ ತಪ್ಪಾಗಲಾರದು.
ಶುಭಾರಂಭದ ಸೂಚನೆ: ಹೊಸ ದಿನವನ್ನು ಶುಭವಾಗಿ ಆರಂಭಿಸುವ ಸಂದೇಶ ರಂಗೋಲಿ ನೀಡುತ್ತದೆ.

