ತಿರುಪತಿ ತಿಮ್ಮಪ್ಪನ ದರ್ಶನ ಎಂದರೆ ಲಕ್ಷಾಂತರ ಭಕ್ತರ ಭರವಸೆಯ ತಾಣ. ದೇವರನ್ನು ನೋಡೋ ಸಂತೋಷಕ್ಕಿಂತಲೂ, ತಿಮ್ಮಪ್ಪನ ಪಾದಕ್ಕೆ ಮುಡಿ ಸಮರ್ಪಿಸುವ ಸಂಪ್ರದಾಯಕ್ಕೆ ಭಕ್ತರಲ್ಲಿ ಅಪಾರ ಭಕ್ತಿ ಇದೆ. ತಲೆ ಕೂದಲು ದೇವರಿಗೆ ಅರ್ಪಿಸುವುದು ಸಾಮಾನ್ಯ ಕಾಣಿಕೆಯಂತೆ ಕಾಣಿಸಿದರೂ, ಇದರ ಹಿಂದೆ ಆಳವಾದ ನಂಬಿಕೆ, ತತ್ವ ಮತ್ತು ಪುರಾಣಕಥೆಯೊಂದಿದೆ. ಈ ಭಕ್ತಿ ಕೇವಲ ಒಂದು ವಿಧಿಯಲ್ಲ, ಜೀವಿತವನ್ನೇ ದೇವರಿಗೆ ಅರ್ಪಿಸುವ ಸಂಕೇತವೂ ಆಗಿದೆ ಎನ್ನುತ್ತಾರೆ ಹಿರಿಯರು.
ಸ್ವಾರ್ಥವಿಲ್ಲದ ಸಮರ್ಪಣೆ:
ಮನುಷ್ಯನ ಅತಿ ಪ್ರಿಯವಾದ ‘ರೂಪ’ ಎಂಬ ಅಹಂಕಾರವನ್ನು ತ್ಯಜಿಸುವ ಸಂಕೇತವಾಗಿ ಮುಡಿ ಕೊಡುವುದು ಎನ್ನಲಾಗುತ್ತದೆ. ‘ನನ್ನಲ್ಲಿರುವ ಎಲ್ಲವೂ ದೇವರೇ’ ಎಂಬ ಭಾವದಿಂದ ಭಕ್ತರು ತಮ್ಮ ಕೂದಲನ್ನು ಅರ್ಪಿಸುತ್ತಾರೆ.
ಪುರಾಣ:
ಒಂದು ದಿನ ನೀಲಾದ್ರಿ ಶಿಖರದಲ್ಲಿ ಬಾಲಾಜಿ ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆಗ ನೀಲಾದ್ರಿ ದೇವಿಯು ತನ್ನ ಪೂಜೆಗೆಂದು ಅಲ್ಲಿಗೆ ಬಂದಾಗ ಬಾಲಾಜಿಯ ತಲೆಯ ಮೇಲಿದ್ದ ಗಾಯದಿಂದ ಅವನ ಕೂದಲು ಉದುರುವುದನ್ನು ಕಂಡಳು. ಆಗ ನೀಲಾದ್ರಿ ದೇವಿಯು ತನ್ನ ಮುಡಿಯನ್ನು ಗಾಯದ ಗುರುತುಗೆ ಹಾಕಿ ಗಾಯವನ್ನು ಕಾಣದ ರೀತಿಯಲ್ಲಿ ಮುಚ್ಚಿದಳು.
ಆಗ ಬಾಲಾಜಿ ನಿದ್ದೆಯಿಂದ ಎದ್ದಾಗ ನೀಲಾದ್ರಿ ದೇವಿಯ ತಲೆಯ ಮೇಲೆ ಕೂದಲು ಇಲ್ಲದಿರುವುದು ಕಂಡಿತು. ನೀಲಾದ್ರಿ ದೇವಿಯು ತನ್ನ ಮೇಲೆ ತೋರಿದ ಭಕ್ತಿಯನ್ನು ಕಂಡು ಸಂತುಷ್ಟನಾದ ಬಾಲಾಜಿಯು ಇತರ ಭಕ್ತರ ಮುಡಿಯನ್ನು ನೀಲಾದ್ರಿ ದೇವಿಗೆ ಪುನಃ ಅರ್ಪಿಸುತ್ತಾರೆ ಬಾಲಾಜಿ. ಅಂದಿನಿಂದ ಅನೇಕ ಭಕ್ತರು ಭಕ್ತಿಯಿಂದ ಇಲ್ಲಿ ಮುಡಿಯನ್ನು ಅರ್ಪಿಸುತ್ತಾರೆ. ಇದನ್ನು ಭಕ್ತಿಯ ಅತ್ಯಂತ ನಿಷ್ಠೆಯ ರೂಪವಾಗಿ ವಿವರಿಸಲಾಗಿದೆ.
ಜೀವನದ ನೋವು-ದುಃಖಗಳನ್ನು ಬಿಡುವ ಸಂಕೇತ
ಬಹಳ ಮಂದಿ ಮುಡಿ ಕೊಡುವುದನ್ನು ಕಷ್ಟ, ರೋಗ ಅಥವಾ ಸಮಸ್ಯೆಗಳ ನಿವಾರಣೆಗೆ ಮಾಡಿದ ವ್ರತವಾಗಿ ನಂಬುತ್ತಾರೆ. ಮುಡಿ ಸಮರ್ಪಿಸುವ ಕ್ಷಣದಲ್ಲಿ ಮನಸ್ಸು ಶುದ್ಧವಾಗುತ್ತದೆ ಎಂಬ ಭಾವನೆಯೂ ಇದೆ.
ದೇವಾಲಯದ ಮಹತ್ವದ ಸೇವೆ
ತಿರುಮಲ ದೇವಾಲಯದಲ್ಲಿ ಸಂಗ್ರಹವಾಗುವ ಈ ಕೂದಲು ಜಗತ್ತಿನಾದ್ಯಂತ ಮಾರಾಟವಾಗುತ್ತದೆ. ಈ ಹಣವನ್ನು ಅನ್ನಪ್ರಸಾದ, ಆಸ್ಪತ್ರೆ, ದಾನ ಕಾರ್ಯಗಳು ಸೇರಿದಂತೆ ಹಲವು ಸಾಮಾಜಿಕ ಸೇವೆಗಳಿಗೆ ಬಳಸಲಾಗುತ್ತದೆ.
ಸಮರ್ಪಣೆಯ ಆಧ್ಯಾತ್ಮಿಕ ಅನುಭವ
ಮುಡಿ ಕೊಟ್ಟ ನಂತರ ಭಕ್ತರು ಅನುಭವಿಸುವ ಹಗುರತೆ, ಆಂತರಿಕ ಶಾಂತಿ ತಿಮ್ಮಪ್ಪನ ಕೃಪೆಯ ಸಂಕೇತವಾಗಿದೆ ಎಂದು ಭಕ್ತರು ನಂಬುತ್ತಾರೆ.

