ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಆರ್ಥಿಕ ದಿಕ್ಕನ್ನು ನಿರ್ಧರಿಸುವ ಕೇಂದ್ರ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಭಾನುವಾರ ಒಂಬತ್ತನೇ ಬಾರಿ ಬಜೆಟ್ ಮಂಡಿಸಲು ಸಜ್ಜಾಗಿದ್ದು, ಈ ಮೂಲಕ ಸತತವಾಗಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವೆಯೆಂಬ ದಾಖಲೆಗೆ ಇನ್ನೊಂದು ಅಧ್ಯಾಯ ಸೇರಿಸಲಿದ್ದಾರೆ.
2019ರ ಮೇ 31ರಂದು ಹಣಕಾಸು ಸಚಿವೆ ಆಗಿ ಅಧಿಕಾರ ಸ್ವೀಕರಿಸಿದ ನಿರ್ಮಲಾ ಅವರು, ಕೋವಿಡ್ ಸಾಂಕ್ರಾಮಿಕದಿಂದ ಹಿಡಿದು ಜಾಗತಿಕ ಆರ್ಥಿಕ ಅಸ್ಥಿರತೆಗಳವರೆಗೆ ಹಲವು ಸವಾಲುಗಳ ನಡುವೆ ದೇಶದ ಹಣಕಾಸು ಹೊಣೆಗಾರಿಕೆಯನ್ನು ನಿಭಾಯಿಸಿದ್ದಾರೆ.
ಜನವರಿ 31ಕ್ಕೆ ಅವರ ಹಣಕಾಸು ಸಚಿವೆಯಾಗಿ ಆರು ವರ್ಷ ಎಂಟು ತಿಂಗಳು ಪೂರ್ಣಗೊಂಡಿದ್ದು, ಇದೀಗ ಫೆಬ್ರವರಿ 1ರಂದು ಮತ್ತೊಂದು ಐತಿಹಾಸಿಕ ಬಜೆಟ್ ಮಂಡನೆಗೆ ವೇದಿಕೆ ಸಿದ್ಧವಾಗಿದೆ.
ಇದನ್ನೂ ಓದಿ:
ಹಿಂದೆ ಭಾರತದಲ್ಲಿ ಬಜೆಟ್ ಅನ್ನು ಫೆಬ್ರವರಿ ಕೊನೆಯ ಕೆಲಸದ ದಿನ ಮಂಡಿಸುವ ಪದ್ಧತಿ ಇತ್ತು. ಜೊತೆಗೆ ಹಣಕಾಸು ವರ್ಷವು ಏಪ್ರಿಲ್ 1 ರಂದು ಪ್ರಾರಂಭವಾಗುತ್ತದೆ, ಅಂದರೆ ಸಚಿವಾಲಯಗಳು, ವ್ಯವಹಾರಗಳು ಮತ್ತು ತೆರಿಗೆದಾರರು ಹೊಸ ನೀತಿಗಳು ಮತ್ತು ತೆರಿಗೆ ನಿಯಮಗಳ ಮೇಲೆ ಕಾರ್ಯನಿರ್ವಹಿಸಲು ಬಹಳ ಕಡಿಮೆ ಸಮಯವಿರುತ್ತಿತ್ತು. ಹಾಗೂ ಇದರಿಂದ ಹೊಸ ಹಣಕಾಸು ವರ್ಷ ಆರಂಭಕ್ಕೆ ಮೊದಲು ನೀತಿಗಳನ್ನು ಜಾರಿಗೆ ತರಲು ಸಮಯ ಸಿಗುತ್ತಿರಲಿಲ್ಲ. ಈ ಕಾರಣದಿಂದ 2017ರಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಫೆಬ್ರವರಿ 1ರಂದು ಬಜೆಟ್ ಮಂಡಿಸುವ ಪರಂಪರೆಯನ್ನು ಆರಂಭಿಸಿದರು.
ಅದೇ ವೇಳೆ, 1999ರವರೆಗೆ ಸಂಜೆ 5 ಗಂಟೆಗೆ ನಡೆಯುತ್ತಿದ್ದ ಬಜೆಟ್ ಭಾಷಣವನ್ನು ಬೆಳಿಗ್ಗೆ 11 ಗಂಟೆಗೆ ಬದಲಾಯಿಸಲಾಯಿತು. ಈ ಬಾರಿ ಫೆಬ್ರವರಿ 1 ಭಾನುವಾರ ಬಂದರೂ, ದಿನಾಂಕ ಬದಲಿಸದೇ ಬಜೆಟ್ ಮಂಡನೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.



