ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ಜಾಮ್‌ನಗರದಲ್ಲಿ ಇರುವ ವಂತಾರ ಯೋಜನೆ ಮತ್ತು ಅದರ ಎರಡು ಸಂಬಂಧಿತ ಸಂಸ್ಥೆಗಳಾದ ಗ್ರೀನ್ ಝೂಲಾಜಿಕಲ್ ರೆಸ್ಕ್ಯೂ ಮತ್ತು ರಿಕವರಿ ಸೆಂಟರ್ (GZRRC) ಮತ್ತು ರಾಧಾಕೃಷ್ಣ ದೇವಾಲಯ ಆನೆ ಕಲ್ಯಾಣ ಟ್ರಸ್ಟ್ (RKTEWT)ನ ಅತ್ಯುತ್ತಮ ಪದ್ಧತಿಗಳು ಮತ್ತು ಕೆಲಸವನ್ನು ಸಿಐಟಿಎಸ್ ಬಹಿರಂಗವಾಗಿ ಶ್ಲಾಘಿಸಿದೆ. ವಿಶ್ವದಾದ್ಯಂತ ಅಳಿವಿನ ಅಂಚಿನಲ್ಲಿ ಇರುವ ವಿವಿಧ ಪ್ರಭೇದದ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳ ಅಕ್ರಮ ವ್ಯಾಪಾರದ ಮೇಲ್ವಿಚಾರಣೆ ಮಾಡುವ ಸಂಸ್ಥೆ ಸಿಐಟಿಇಎಸ್. ಅಂದ ಹಾಗೆ ಇದಕ್ಕೂ ಮುನ್ನ ಭಾರತದ ಸರ್ವೋಚ್ಚ ನ್ಯಾಯಾಲಯವು (ಸುಪ್ರೀಂ ಕೋರ್ಟ್) ವಂತಾರಕ್ಕೆ ಕ್ಲೀನ್ ಚಿಟ್ ನೀಡಿತ್ತು.
ಎರಡೂ ಸಂಸ್ಥೆಗಳು ಅತ್ಯಂತ ಉನ್ನತ ಗುಣಮಟ್ಟದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ತನ್ನ ತನಿಖಾ ವರದಿಯಲ್ಲಿ CITES ಹೇಳಿದೆ. ಪ್ರಾಣಿಗಳಿಗೆ ಆಧುನಿಕ ವ್ಯವಸ್ಥೆಯ ನೆಲೆಗಳು, ವೈದ್ಯಕೀಯ ಆರೈಕೆ ಮತ್ತು ಸುಧಾರಿತ ಸೌಲಭ್ಯಗಳು ಲಭ್ಯವಿದೆ. ವರದಿಯ ಪ್ರಕಾರ, ಈ ಸಂಸ್ಥೆಗಳು ಪಶುವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಗಮನಾರ್ಹ ಪ್ರಗತಿ ಸಾಧಿಸಿವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಈ ಸಂಸ್ಥೆಗಳು ತಮ್ಮ ಪಶುವೈದ್ಯಕೀಯ ಅನುಭವವನ್ನು ವೈಜ್ಞಾನಿಕ ಸಮುದಾಯದೊಂದಿಗೆ ಹಂಚಿಕೊಳ್ಳಬೇಕು ಎಂದು ವರದಿ ಶಿಫಾರಸು ಮಾಡಿದೆ.
ಭಾರತದ ವನ್ಯಜೀವಿ ರಕ್ಷಣೆ ಮತ್ತು ನಿಯಂತ್ರಕ ವ್ಯವಸ್ಥೆಯು ಅಂತಾರಾಷ್ಟ್ರೀಯ ಮಾನದಂಡಗಳನ್ನು ಪಾಲಿಸುತ್ತವೆ ಮತ್ತು ವಂತಾರ ಪ್ರಾಣಿ ಸಂರಕ್ಷಣಾ ಕ್ಷೇತ್ರದಲ್ಲಿ ಹೊಸ ಪೂರ್ವ ನಿದರ್ಶನವನ್ನು ನಿಗದಿ ಮಾಡುತ್ತಿದೆ ಎಂದು ವರದಿ ಹೇಳಿದೆ. GZRRC ಮತ್ತು RKTEWT ನಡೆಸುವ ಎಲ್ಲ ಪ್ರಾಣಿ ಆಮದು ಪ್ರಕ್ರಿಯೆಗಳು ಭಾರತೀಯ ಕಾನೂನುಗಳಿಗೆ ಅನುಸಾರವಾಗಿ ಸಂಪೂರ್ಣವಾಗಿ ಕಾನೂನುಬದ್ಧ ಮತ್ತು ಪಾರದರ್ಶಕವಾಗಿವೆ ಎಂದು ಭಾರತ ಸರ್ಕಾರ ಖಚಿತಪಡಿಸಿದೆ ಎಂದು CITES ಹೇಳಿದೆ.
ಎಲ್ಲ ಪ್ರಾಣಿಗಳನ್ನು CITES ರಫ್ತು ಅಥವಾ ಮರು-ರಫ್ತು ಪರವಾನಗಿಗಳೊಂದಿಗೆ ಭಾರತಕ್ಕೆ ತರಲಾಗಿದೆ ಎಂದು ಸಂಸ್ಥೆಯ ತನಿಖೆಯಲ್ಲಿ ಕಂಡುಬಂದಿದೆ. ಯಾವುದೇ ಪ್ರಾಣಿಗಳನ್ನು ಪರವಾನಗಿ ಇಲ್ಲದೆ ಭಾರತಕ್ಕೆ ತಂದಿಲ್ಲ. ಇದಲ್ಲದೆ, ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಪ್ರಾಣಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಅಥವಾ ಮಾರಾಟ ಮಾಡಲಾಗುತ್ತಿದೆ ಎಂಬ ಯಾವುದೇ ಸುಳಿವು ಇಲ್ಲ. ಪಾರದರ್ಶಕತೆಯ ಕೊರತೆಯಿಂದಾಗಿ ಕ್ಯಾಮರೂನ್‌ನಿಂದ ಚಿಂಪಾಂಜಿಗಳ ಆಮದನ್ನು ವಂತಾರ ಹೇಗೆ ರದ್ದುಗೊಳಿಸಿದೆ ಎಂಬುದನ್ನು ವರದಿಯು ನಿರ್ದಿಷ್ಟವಾಗಿ ಎತ್ತಿ ತೋರಿಸಿದೆ.

