ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾ ಮತ್ತು ಕೆನಡಾ ನಡುವೆ ಏರ್ಪಟ್ಟಿರುವ ಹೊಸ ವ್ಯಾಪಾರ ಒಪ್ಪಂದವು ಉತ್ತರ ಅಮೆರಿಕಾದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಕೆನಡಾವು ಚೀನಾದೊಂದಿಗೆ ವ್ಯಾಪಾರ ಸಂಬಂಧವನ್ನು ವೃದ್ಧಿಸಿಕೊಂಡರೆ, ಕೆನಡಾದಿಂದ ಅಮೆರಿಕಕ್ಕೆ ಬರುವ ಎಲ್ಲಾ ಸರಕುಗಳ ಮೇಲೆ 100% ಆಮದು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ತಮ್ಮ ‘ಟ್ರೂತ್ ಸೋಷಿಯಲ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಚೀನಾವು ಅಮೆರಿಕಕ್ಕೆ ತನ್ನ ಉತ್ಪನ್ನಗಳನ್ನು ರವಾನಿಸಲು ಕೆನಡಾವನ್ನು ಒಂದು ‘ಡ್ರಾಪ್ ಆಫ್ ಪೋರ್ಟ್’ (ಸಾಗಣೆ ಕೇಂದ್ರ) ಆಗಿ ಬಳಸಿಕೊಳ್ಳಬಹುದು ಎಂದು ಕಾರ್ನಿ ಭಾವಿಸಿದ್ದರೆ ಅದು ಅವರ ತಪ್ಪು ಕಲ್ಪನೆ,” ಎಂದು ಟಾಂಗ್ ನೀಡಿದ್ದಾರೆ. ಅಷ್ಟೇ ಅಲ್ಲದೆ, “ಚೀನಾ ಕೆನಡಾವನ್ನು ಜೀವಂತವಾಗಿ ತಿಂದು ಹಾಕುತ್ತದೆ. ಅಲ್ಲಿನ ವ್ಯವಹಾರ, ಸಾಮಾಜಿಕ ವ್ಯವಸ್ಥೆ ಮತ್ತು ಜೀವನಶೈಲಿಯನ್ನು ನಾಶಪಡಿಸುತ್ತದೆ,” ಎಂದು ಎಚ್ಚರಿಸಿದ್ದಾರೆ.
ಅಮೆರಿಕದ ಮೇಲಿನ ತನ್ನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡಲು ಕೆನಡಾ ಈಗ ಚೀನಾದತ್ತ ಮುಖ ಮಾಡಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾದ ನಂತರ ಮಾರ್ಕ್ ಕಾರ್ನಿ ಈ ‘ಹೊಸ ಕಾರ್ಯತಂತ್ರದ ಪಾಲುದಾರಿಕೆ’ಯನ್ನು ಘೋಷಿಸಿದ್ದಾರೆ.
ಕೆನೋಲಾ ಬೀಜಗಳ ಮೇಲಿನ ಸುಂಕವನ್ನು ಚೀನಾ ಶೇ. 84 ರಿಂದ ಶೇ. 15 ಕ್ಕೆ ಇಳಿಸಲಿದೆ. ಅಲ್ಲದೆ, ಕೆನಡಾ ಪ್ರವಾಸಿಗರಿಗೆ ಚೀನಾಕ್ಕೆ ವೀಸಾ ಮುಕ್ತ ಪ್ರವೇಶ ಸಿಗಲಿದೆ.
ಪ್ರತಿಯಾಗಿ ಕೆನಡಾವು ಸುಮಾರು 49,000 ಚೀನೀ ಎಲೆಕ್ಟ್ರಿಕ್ ವಾಹನಗಳನ್ನು (EV) ಕೇವಲ ಶೇ. 6.1 ರಷ್ಟು ಕಡಿಮೆ ಸುಂಕದಲ್ಲಿ ಆಮದು ಮಾಡಿಕೊಳ್ಳಲು ಒಪ್ಪಿಕೊಂಡಿದೆ.
ಈ ಬೆಳವಣಿಗೆಯು ಕೆನಡಾ ಮತ್ತು ಅಮೆರಿಕದ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಬಿರುಕು ಮೂಡಿಸುವ ಸಾಧ್ಯತೆ ದಟ್ಟವಾಗಿದೆ.



