January21, 2026
Wednesday, January 21, 2026
spot_img

ಹೀಗೂ ಔಟ್ ಆಗ್ತಾರಾ ಬಾಬರ್? ಜವಾಬ್ದಾರಿಯಿಲ್ಲದ ಬ್ಯಾಟಿಂಗ್‌ಗೆ ಸಿಕ್ಕಿತು ತಕ್ಕ ಶಿಕ್ಷೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್ ಬ್ಯಾಷ್ ಲೀಗ್‌ನ ಹೈವೋಲ್ಟೇಜ್ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ತಂಡಕ್ಕೆ ಪಾಕಿಸ್ತಾನದ ಬ್ಯಾಟಿಂಗ್ ದಿಗ್ಗಜ ಬಾಬರ್ ಆಝಂ ದೊಡ್ಡ ಆಘಾತ ನೀಡಿದ್ದಾರೆ. ಪರ್ತ್ ಸ್ಕಾಚರ್ಸ್ ವಿರುದ್ಧದ ಈ ನಿರ್ಣಾಯಕ ಪಂದ್ಯದಲ್ಲಿ ಬಾಬರ್ ಆಝಂ ಶೂನ್ಯಕ್ಕೆ ಔಟ್ ಆಗಿದ್ದಲ್ಲದೆ, ಅವರು ವಿಕೆಟ್ ಒಪ್ಪಿಸಿದ ರೀತಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮೊದಲು ಬ್ಯಾಟ್ ಮಾಡಿದ ಪರ್ತ್ ಸ್ಕಾಚರ್ಸ್ ತಂಡವನ್ನು ಸಿಡ್ನಿ ಬೌಲರ್‌ಗಳು ಕೇವಲ 147 ರನ್‌ಗಳಿಗೆ ನಿಯಂತ್ರಿಸಿದ್ದರು. 148 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಸಿಡ್ನಿಗೆ ಬಾಬರ್ ಆಝಂ ಭದ್ರ ಬುನಾದಿ ಹಾಕಿಕೊಡುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ನಡೆದಿದ್ದೇ ಬೇರೆ.

ಪರ್ತ್ ಸ್ಕಾಚರ್ಸ್ ತಂಡ ಮೊದಲ ಓವರ್‌ನಲ್ಲೇ ಸ್ಪಿನ್ನರ್ ಬಳಸುವ ಮೂಲಕ ಚಾಣಾಕ್ಷ ತಂತ್ರ ರೂಪಿಸಿತ್ತು. ಈ ತಂತ್ರವನ್ನು ಅರಿಯದ ಬಾಬರ್ ಆಝಂ, ಮೊದಲ ಓವರ್‌ನ ಎರಡನೇ ಎಸೆತದಲ್ಲೇ ಕ್ರೀಸ್ ಬಿಟ್ಟು ಮುಂದೆ ಬಂದು ದೊಡ್ಡ ಶಾಟ್ ಬಾರಿಸಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್‌ಗೆ ಸಿಗದಿದ್ದಾಗ ವಿಕೆಟ್ ಕೀಪರ್ ಮಿಂಚಿನ ವೇಗದಲ್ಲಿ ಬೇಲ್ಸ್ ಹಾರಿಸಿದರು. ಈ ಮೂಲಕ ಬಾಬರ್ ಕೇವಲ 2 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಪೆವಿಲಿಯನ್ ಸೇರಿದರು.

ಬಾಬರ್ ನೀಡಿದ ಈ ಆರಂಭಿಕ ಆಘಾತದಿಂದ ಸಿಡ್ನಿ ಸಿಕ್ಸರ್ಸ್ ಚೇತರಿಸಿಕೊಳ್ಳಲೇ ಇಲ್ಲ. ಬಾಬರ್ ವಿಕೆಟ್‌ನಿಂದ ಆತ್ಮವಿಶ್ವಾಸ ಪಡೆದ ಪರ್ತ್ ಬೌಲರ್‌ಗಳು ಮಾರಕ ದಾಳಿ ಸಂಘಟಿಸಿದರು. ಪರಿಣಾಮವಾಗಿ 148 ರನ್‌ಗಳ ಗುರಿ ಬೆನ್ನಟ್ಟಿದ ಸಿಡ್ನಿ ಸಿಕ್ಸರ್ಸ್ ಕೇವಲ 99 ರನ್‌ಗಳಿಗೆ ಆಲೌಟ್ ಆಗಿ, 48 ರನ್‌ಗಳ ಹೀನಾಯ ಸೋಲು ಅನುಭವಿಸಿತು.

ಈ ಗೆಲುವಿನೊಂದಿಗೆ ಪರ್ತ್ ಸ್ಕಾಚರ್ಸ್ ಫೈನಲ್ ತಲುಪಿದರೆ, ಸಿಡ್ನಿ ಅಭಿಮಾನಿಗಳು ಮಾತ್ರ ಬಾಬರ್ ಆಝಂ ಅವರ ಜವಾಬ್ದಾರಿಯಿಲ್ಲದ ಆಟದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Must Read