ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಸೆ. 9 ರಂದು ಯುಎಇಯಲ್ಲಿ ಆರಂಭವಾಗಲಿದೆ. ಭಾರತ, ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಯುಎಇ, ಓಮನ್ ಮತ್ತು ಹಾಂಗ್ ಕಾಂಗ್ ತಂಡಗಳು ಆಡಲಿವೆ.
ಇತ್ತ ವಿಶ್ವದಾದ್ಯಂತ ಕುತೂಹಲ ಮೂಡಿಸಿರುವ ಮ್ಯಾಚ್ ಭಾರತ-ಪಾಕಿಸ್ತಾನ ನಡುವೆ ಸೆಪ್ಟೆಂಬರ್ 14 ರಂದು ನಡೆಯಲಿದೆ. ಆದರೆ ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದು, ಏಷ್ಯಾ ಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಇದೀಗ ಭಾರತೀಯ ಕ್ರೀಡಾ ಸಚಿವಾಲಯ ಈ ಬಗ್ಗೆ ಹೊಸ ನೀತಿಯನ್ನು ಪ್ರಕಟಿಸಿದೆ. ಈ ನೀತಿಯ ಪ್ರಕಾರ, ಭಾರತೀಯ ಕ್ರಿಕೆಟ್ ತಂಡವು 2025 ರ ಸೆಪ್ಟೆಂಬರ್ 9 ರಿಂದ ಯುಎಇಯಲ್ಲಿ ನಡೆಯಲಿರುವ ಏಷ್ಯಾ ಕಪ್‌ನಲ್ಲಿ ಭಾಗವಹಿಸಲಿದೆ ಎಂದು ದೃಢಪಡಿಸಲಾಗಿದೆ. ಆದರೆ ಭಾರತ ತಂಡ ಪಾಕಿಸ್ತಾನದಲ್ಲಿ ನಡೆಯುವ ಯಾವುದೇ ದ್ವಿಪಕ್ಷೀಯ ಕ್ರೀಡಾ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ. ಅದೇ ರೀತಿ ಪಾಕಿಸ್ತಾನ ತಂಡವೂ ಭಾರತದಲ್ಲಿ ನಡೆಯುವ ದ್ವಿಪಕ್ಷೀಯ ಪಂದ್ಯಗಳಲ್ಲಿ ಆಡಲು ಅವಕಾಶವಿರುವುದಿಲ್ಲ.
ಏಷ್ಯಾ ಕಪ್, ವಿಶ್ವಕಪ್, ಒಲಿಂಪಿಕ್ಸ್‌ನಂತಹ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತ ತಂಡ ಪಾಕಿಸ್ತಾನದೊಂದಿಗೆ ಆಡಲು ಯಾವುದೇ ಅಡ್ಡಿಯಿಲ್ಲ. ಪಾಕಿಸ್ತಾನದಲ್ಲಿ ನಡೆಯುವ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತ ತಂಡಗಳು ಭಾಗವಹಿಸುವ ಬಗ್ಗೆ, ಆಯಾ ಸಂದರ್ಭಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭಾರತೀಯ ಕ್ರೀಡಾ ಸಚಿವಾಲಯ ತಿಳಿಸಿದೆ.