ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಸೀಸನ್-19 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಆದರೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತನ್ನ ತವರು ನೆಲವಾದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಆಡುವುದೇ ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸ್ಟೇಡಿಯಂ ಮೇಲಿದ್ದ ನಿಷೇಧ ತೆರವಾದರೂ, ರಾಜ್ಯ ಸರ್ಕಾರ ವಿಧಿಸಿರುವ ಕಠಿಣ ಷರತ್ತುಗಳು ಫ್ರಾಂಚೈಸಿ ಮಾಲೀಕರನ್ನು ಇಕ್ಕಟ್ಟಿಗೆ ಸಿಲುಕಿಸಿವೆ.
ಬೆಂಗಳೂರಿನಲ್ಲಿ ಪಂದ್ಯ ಆಯೋಜಿಸಲು ಸರ್ಕಾರ ಅನುಮತಿ ನೀಡಿದ್ದರೂ, ಭದ್ರತೆಯ ದೃಷ್ಟಿಯಿಂದ ಕಠಿಣ ನಿಯಮವನ್ನು ಜಾರಿಗೊಳಿಸಿದೆ. ಪಂದ್ಯದ ದಿನದಂದು ಕೇವಲ ಕ್ರೀಡಾಂಗಣದ ಒಳಗಷ್ಟೇ ಅಲ್ಲದೆ, ಸ್ಟೇಡಿಯಂ ಸುತ್ತಮುತ್ತಲಿನ ರಸ್ತೆಗಳಲ್ಲಿ ಯಾವುದೇ ಅಹಿತಕರ ಅಥವಾ ದುರ್ಘಟನೆಗಳು ಸಂಭವಿಸಿದರೂ ಅದಕ್ಕೆ ಆರ್ಸಿಬಿ ಫ್ರಾಂಚೈಸಿಯೇ ನೇರ ಹೊಣೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕಾನೂನು ಸುವ್ಯವಸ್ಥೆಯ ಈ ದೊಡ್ಡ ಜವಾಬ್ದಾರಿಯನ್ನು ಹೊರಲು ಆರ್ಸಿಬಿ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಹೊರಗಿನ ಘಟನೆಗಳಿಗೆ ಫ್ರಾಂಚೈಸಿಯನ್ನು ಹೊಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಈಗ ದೊಡ್ಡ ಚರ್ಚೆಯ ವಿಷಯವಾಗಿದೆ.
ಈ ಗೊಂದಲದ ನಡುವೆಯೇ, ತನ್ನ ಹೋಮ್ ಗ್ರೌಂಡ್ ಯಾವುದು ಎಂಬುದನ್ನು ತಿಳಿಸಲು ಬಿಸಿಸಿಐ ಆರ್ಸಿಬಿಗೆ ಜನವರಿ 27 ರವರೆಗೆ ಸಮಯ ನೀಡಿದೆ. ಅಂದು ಆರ್ಸಿಬಿ ಅಂತಿಮ ನಿರ್ಧಾರ ಪ್ರಕಟಿಸಲಿದೆ.
ಒಂದು ವೇಳೆ ಆರ್ಸಿಬಿ ಮ್ಯಾನೇಜ್‌ಮೆಂಟ್ ಸರ್ಕಾರದ ಷರತ್ತುಗಳಿಗೆ ಒಪ್ಪದಿದ್ದರೆ, ಈ ಬಾರಿ ಬೆಂಗಳೂರಿನ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಪಂದ್ಯಗಳನ್ನು ನೋಡಲು ಬೇರೆ ನಗರಗಳಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಬಹುದು.


