ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಒಂದು ಕಲಾಕೃತಿ ಒಮ್ಮೆ ಜನರ ಮನಸ್ಸಿನಲ್ಲಿ ‘ಬ್ರ್ಯಾಂಡ್’ ಆಗಿ ಕುಳಿತುಬಿಟ್ಟರೆ, ಅದರ ನಂತರ ಬರುವ ಅದೇ ಮಾದರಿಯ ಪ್ರಯತ್ನಗಳನ್ನು ಜನರು ಹಳೆಯದಕ್ಕೆ ಹೋಲಿಸುವುದು ಸಹಜ. ಈಗ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ವಿಚಾರದಲ್ಲೂ ಇದೇ ಆಗುತ್ತಿದೆ.
ದಶಕಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಮಾನಂದ್ ಸಾಗರ್ ಅವರ ‘ರಾಮಾಯಣ’ ಧಾರಾವಾಹಿ ಇಂದಿಗೂ ಭಾರತೀಯರ ಪಾಲಿಗೆ ಐಕಾನಿಕ್.
ವಿಶೇಷವೆಂದರೆ, ಹಳೆಯ ಸರಣಿಯಲ್ಲಿ ಲಕ್ಷ್ಮಣನ ಪಾತ್ರದ ಮೂಲಕ ಜನಪ್ರಿಯರಾಗಿದ್ದ ಸುನೀಲ್ ಲಹರಿ ಅವರು ಈ ಟೀಸರ್ ಬಗ್ಗೆ ತಮ್ಮ ನೇರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಣಬೀರ್ ಕಪೂರ್ ಅವರನ್ನು ರಾಮನ ಪಾತ್ರದಲ್ಲಿ ನೋಡಿ ಸುನೀಲ್ ಅವರಿಗೆ ಪೂರ್ಣ ತೃಪ್ತಿ ಸಿಕ್ಕಿಲ್ಲ.
“ರಣಬೀರ್ ಕಪೂರ್ ಉತ್ತಮ ನಟ ನಿಜ, ಆದರೆ ರಾಮನ ಪಾತ್ರಕ್ಕೆ ಬೇಕಾದ ಆ ಮುಗ್ಧತೆ ಅವರಲ್ಲಿ ಕೊಂಚ ಕಡಿಮೆ ಎನಿಸುತ್ತಿದೆ. ಅರುಣ್ ಗೋವಿಲ್ ಅವರಲ್ಲಿ ಕಾಣುತ್ತಿದ್ದ ಆ ಶಾಂತತೆ ಮತ್ತು ತಾಳ್ಮೆ ಇಲ್ಲಿ ಮಿಸ್ ಆಗಿದೆ. ರಣಬೀರ್ ಅವರ ಲುಕ್ ಸ್ವಲ್ಪ ಕಠಿಣವಾಗಿ ಕಾಣುತ್ತಿದೆ. ಅವರು ರಾಮನಿಗಿಂತ ಭರತ ಅಥವಾ ಲಕ್ಷ್ಮಣನ ಪಾತ್ರಕ್ಕೆ ಹೆಚ್ಚು ಸೂಕ್ತವಾಗುತ್ತಿದ್ದರು,” ಎಂದು ಸುನೀಲ್ ಅಭಿಪ್ರಾಯಪಟ್ಟಿದ್ದಾರೆ.



