ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಮತ್ತು ಸ್ಟಾರ್ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಫ್ರಾಂಚೈಸಿ ತೊರೆಯಲು ಬಯಸುತ್ತಿದ್ದಾರೆ ಎಂಬ ವರದಿ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ್ ಪರ ಅತೀ ಹೆಚ್ಚು ಪಂದ್ಯಗಳನ್ನಾಡಿದ, ಅತೀ ಹೆಚ್ಚು ರನ್‌ಗಳಿಸಿದ ಹಾಗೂ ಯಶಸ್ವಿ ನಾಯಕನಾಗಿ ಹೆಸರು ಮಾಡಿದ 30 ವರ್ಷದ ಕೇರಳ ಕ್ರಿಕೆಟಿಗ, ಐಪಿಎಲ್ 2026 ಹರಾಜಿಗೆ ಮುನ್ನ ಜೈಪುರ ಮೂಲದ ತಂಡದಿಂದ ದೂರವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತೊರೆಯುವ ಸುದ್ದಿಯ ನಡುವೆ, ಚೆನ್ನೈ ಸೂಪರ್ ಕಿಂಗ್ಸ್ ಅವರು ತಮ್ಮ ತಂಡಕ್ಕೆ ಕರೆತರಲು ಯೋಚಿಸುತ್ತಿರುವುದಾಗಿ ತಿಳಿದು ಬಂದಿದೆ. ಐಪಿಎಲ್ 2025 ಮುಗಿದ ಬಳಿಕ, ಸ್ಯಾಮ್ಸನ್ ಅಮೆರಿಕದಲ್ಲಿ ಸಿಎಸ್‌ಕೆ ಮ್ಯಾನೇಜ್ಮೆಂಟ್ ಹಾಗೂ ಮುಖ್ಯ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ. ಚೆನ್ನೈ ನಗದು ವಹಿವಾಟಿನ ಮೂಲಕ ಅವರನ್ನು ಪಡೆದುಕೊಳ್ಳಲು ಸಿದ್ಧವಾಗಿದ್ದರೂ, ರಾಜಸ್ಥಾನ್ ತಮ್ಮ ಬದಲು ಚೆನ್ನೈನ ಇಬ್ಬರು ಆಟಗಾರರನ್ನು ವಿನಿಮಯವಾಗಿ ಪಡೆಯಲು ಆಸಕ್ತಿ ತೋರಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ಜೊತೆಗೆ, ಕೋಲ್ಕತಾ ನೈಟ್ ರೈಡರ್ಸ್ ಕೂಡ ಸ್ಯಾಮ್ಸನ್ ಅವರನ್ನು ಸೆಳೆಯಲು ಉತ್ಸುಕತೆಯಿದೆ. ಆದಾಗ್ಯೂ, ಸ್ಯಾಮ್ಸನ್ ಚೆನ್ನೈ ತಂಡ ಸೇರಿಕೊಳ್ಳಲು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. 2012ರಲ್ಲಿ ಕೆಕೆಆರ್ ತಂಡದ ಭಾಗವಾಗಿದ್ದರೂ, ಅವರಿಗೆ ಆಗ ಪ್ಲೇಯಿಂಗ್ 11ರಲ್ಲಿ ಅವಕಾಶ ಸಿಗಲಿಲ್ಲ. ಎರಡೂ ತಂಡಗಳು ಒಪ್ಪಂದಕ್ಕೆ ಬರದಿದ್ದರೆ, ಸ್ಯಾಮ್ಸನ್ ಹರಾಜಿಗೆ ಭಾಗವಹಿಸುವ ಸಾಧ್ಯತೆಯೂ ಇದೆ.
2013ರಲ್ಲಿ ಐಪಿಎಲ್ ಪ್ರವೇಶಿಸಿದ ನಂತರ, ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಪರ 177 ಪಂದ್ಯಗಳನ್ನು ಆಡಿದ್ದಾರೆ. 4704 ರನ್ ಗಳಿಸಿರುವ ಅವರು, ಮೂರು ಶತಕ ಹಾಗೂ 26 ಅರ್ಧಶತಕಗಳನ್ನು ಬಾರಿಸಿದ್ದಾರೆ. ನಾಯಕತ್ವದಲ್ಲಿ ರಾಜಸ್ಥಾನ್ 2022ರಲ್ಲಿ ಐಪಿಎಲ್ ಫೈನಲ್ ಪ್ರವೇಶಿಸಿತು. ಇದುವರೆಗೆ 67 ಪಂದ್ಯಗಳಲ್ಲಿ ನಾಯಕತ್ವ ವಹಿಸಿಕೊಂಡಿರುವ ಅವರು, 33 ಪಂದ್ಯಗಳಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ. ಐಪಿಎಲ್ 2025 ಮೆಗಾ ಹರಾಜಿಗೆ ಮುನ್ನ ರಾಜಸ್ಥಾನ್ ಅವರನ್ನು 18 ಕೋಟಿ ರೂಪಾಯಿಗೆ ಉಳಿಸಿಕೊಂಡಿತ್ತು.