January19, 2026
Monday, January 19, 2026
spot_img

ಕಾವೇರಿ-2, ಇ-ಸ್ವತ್ತು ಡಿಜಿಟಲ್ ಡೇಟಾ ಲಿಂಕ್‌ಗೆ ಶೀಘ್ರವೇ ಪರಿಹಾರ ಸಿಗಲಿದ್ಯಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಕಾವೇರಿ-2 ಮತ್ತು ಇ-ಸ್ವತ್ತು ಡಿಜಿಟಲ್ ಡೇಟಾ ಪರಸ್ಪರ ಲಿಂಕ್ ಮಾಡುವಲ್ಲಿ ಉಂಟಾಗಿರುವ ತಾಂತ್ರಿಕ ತೊಂದರೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಪರಿಷತ್ತಿನಲ್ಲಿ ಸದಸ್ಯರಾದ ಡಿ.ಎಸ್.ಅರುಣ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾವೇರಿ 2.0 ತಂತ್ರಾಂಶದಲ್ಲಿ ವಿಭಾಗಪತ್ರ ಹಾಗೂ ದಾನಪತ್ರಗಳ ನೋಂದಣಿ ಸ್ಥಗಿತವಾಗಿರುವುದಿಲ್ಲ. ಆರ್ಟಿಸಿ, ಮೋಜಿಣಿ ನಕ್ಷೆ, ಇ-ಸ್ವತ್ತು ಖಾತಾ, ಇ-ಆಸ್ತಿ ಖಾತಾ ಹಾಗೂ ಯುಎಲ್‌ಎಮ್‌ಎಸ್ ಖಾತಾ ಹೊಂದಿರುವ ಸ್ವತ್ತುಗಳ ವಿಭಾಗಪತ್ರ ಹಾಗೂ ದಾನಪತ್ರಗಳು ಎಂದಿನಂತೆ ನೋಂದಣಿ ಆಗುತ್ತಿವೆ. ಕಾವೇರಿ 2.0 ತಂತ್ರಾಂಶದಲ್ಲಿ 2024-25ನೇ ಸಾಲಿನಲ್ಲಿ 1,15,068 ವಿಭಾಗ ಪತ್ರಗಳು ಮತ್ತು 1,39,134 ದಾನಪತ್ರಗಳು ಅದೇ ರೀತಿ 2025-26ನೇ ಸಾಲಿನಲ್ಲಿ 79,515 ವಿಭಾಗ ಪತ್ರಗಳು ಹಾಗೂ 92,618 ದಾನಪತ್ರಗಳು ನೋಂದಣಿ ಆಗಿವೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಸರ್ಕಾರದ ಉಪವಿಭಾಗಾಧಿಕಾರಿಗಳ ಎಸಿ ಕೋರ್ಟ್ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಕಳೆದ ಎರಡೂವರೆ ವರ್ಷದಲ್ಲಿ ರಾಜ್ಯ ಸರ್ಕಾರವು ಶೆ.80ರಷ್ಟು ಇತ್ಯರ್ಥಗೊಳಿಸಿದ್ದು, ಇನ್ನುಳಿದ ಬಾಕಿ ಪ್ರಕರಣಗಳನ್ನು ಸಹ ಇತ್ಯರ್ಥಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದರು.

ವಿಧಾನ ಪರಿಷತ್ತಿನಲ್ಲಿ ನಡೆದ ಪ್ರಶ್ನೋತ್ತರ ವೇಳೆ ಸದಸ್ಯರಾದ ರಾಮೋಜಿ ಗೌಡ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹೆಚ್ಚು ಪ್ರಕರಣಗಳು ಬಾಕಿಯಿರುವ ಜಿಲ್ಲೆಗಳಲ್ಲಿನ ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಮೇಲ್ಮನವಿ ಪ್ರಕರಣಗಳನ್ನು ಉಪವಿಭಾಗಾಧಿಕಾರಿ ವೃಂದಕ್ಕೆ ಸಮಾನಾಂತರ ವೃಂದದ ಇತರೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ಎ.ಎಸ್ ಅಧಿಕಾರಿಗಳಿಗೆ ಕಾರ್ಯಹಂಚಿಕೆ ಮಾಡಿ ಸರ್ಕಾರವು ಆದೇಶಿಸಿರುತ್ತದೆ ಎಂದು ಹೇಳಿದರು.

Must Read

error: Content is protected !!