Sunday, October 5, 2025

ಸಿರಾಜ್, ಬುಮ್ರಾ ಬೆಂಕಿ ಬೌಲಿಂಗ್ ಗೆ ಪತರುಗುಟ್ಟಿದ ವಿಂಡೀಸ್: 162 ರನ್ ಗಳಿಗೆ ಆಲೌಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ತೋರಲು ವಿಫಲವಾಗಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ನಾಯಕ ರೋಸ್ಟನ್ ಚೇಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರೂ, ತಂಡ ಕೇವಲ 162 ರನ್‌ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಯಿತು.

ಇನ್ನಿಂಗ್ಸ್ ಆರಂಭದಲ್ಲೇ ವಿಂಡೀಸ್ ತಂಡಕ್ಕೆ ಆಘಾತ ಬಿತ್ತು. ತೇಜ್‌ನರೈನ್ ಚಂದ್ರಪಾಲ್ (0) ರನ್ನು ಮೊಹಮ್ಮದ್ ಸಿರಾಜ್ ಶೂನ್ಯಕ್ಕೆ ಪೆವಿಲಿಯನ್‌ಗೆ ಕಳುಹಿಸಿದರು. ನಂತರ ಜಾನ್ ಕ್ಯಾಂಪ್‌ಬೆಲ್ (8) ವಿಕೆಟ್ ಕಬಳಿಸುವಲ್ಲಿ ಜಸ್ ಪ್ರೀತ್ ಬುಮ್ರಾ ಮಿಂಚಿದರು. ಬ್ರಾಂಡನ್ ಕಿಂಗ್ (13) ಮತ್ತು ಅಲಿಕ್ ಅಥನಾಝ್ (12) ಕೂಡ ಹೆಚ್ಚು ಸಮಯ ಕ್ರೀಸ್‌ನಲ್ಲಿ ತಾಳಲಾರದೆ ಸಿರಾಜ್ ಬೌಲಿಂಗ್‌ಗೆ ಬಲಿಯಾದರು.

ಮಧ್ಯಕ್ರಮದಲ್ಲಿ ಶೈ ಹೋಪ್ (26) ಮತ್ತು ಜಸ್ಟಿನ್ ಗ್ರೀವ್ಸ್ (32) ಮಾತ್ರ ಸ್ವಲ್ಪ ಮಟ್ಟಿಗೆ ಪ್ರತಿರೋಧ ನೀಡಲು ಯತ್ನಿಸಿದರು. ಆದರೆ ಭಾರತೀಯ ಬೌಲರ್‌ಗಳ ಅಬ್ಬರದ ಮುಂದೆ ಉಳಿದ ಆಟಗಾರರು ಕುಸಿದರು. 44.1 ಓವರ್‌ಗಳಲ್ಲಿ ಸಂಪೂರ್ಣ ವೆಸ್ಟ್ ಇಂಡೀಸ್ ತಂಡ 162 ರನ್‌ಗಳಿಗೆ ಆಲೌಟ್ ಆಯಿತು.

ಬೌಲಿಂಗ್ ವಿಭಾಗದಲ್ಲಿ ಟೀಮ್ ಇಂಡಿಯಾ ತಾರೆಯರು ಮಿಂಚಿದರು. ಸಿರಾಜ್ 14 ಓವರ್‌ಗಳಲ್ಲಿ 40 ರನ್ ನೀಡಿ 4 ವಿಕೆಟ್ ಕಬಳಿಸಿದರು. ಬುಮ್ರಾ 14 ಓವರ್‌ಗಳಲ್ಲಿ 42 ರನ್ ನೀಡಿ 3 ವಿಕೆಟ್ ಪಡೆದು ತಮ್ಮ ಸಾಮರ್ಥ್ಯ ತೋರಿಸಿದರು. ಇನ್ನು ಕುಲ್ದೀಪ್ ಯಾದವ್ 2 ವಿಕೆಟ್ ಕಬಳಿಸಿ ತಂಡದ ಗೆಲುವಿನ ಭರವಸೆ ಹೆಚ್ಚಿಸಿದರು.