ಹೊಸದಿಗಂತ ಬೆಳಗಾವಿ:
ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಅಟ್ಟಹಾಸ ಮಿತಿಮೀರುತ್ತಿದ್ದು, ಸಾಲದ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದಲ್ಲಿ ನಡೆದಿದೆ.
ಅನಿಗೋಳ ಗ್ರಾಮದ ಗೌರವ್ವ ನೀಲಪ್ಪ ಕೆಂಗಾನೂರು (36) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಜೀವನೋಪಾಯಕ್ಕಾಗಿ ವಿವಿಧ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸುಮಾರು 7 ರಿಂದ 10 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆದಿದ್ದರು ಎನ್ನಲಾಗಿದೆ. ಆದರೆ, ಸಾಲ ಮರುಪಾವತಿ ಮಾಡುವಂತೆ ಒತ್ತಡ ಹೇರುತ್ತಿದ್ದ ಫೈನಾನ್ಸ್ ಸಿಬ್ಬಂದಿ, ಗೌರವ್ವ ಅವರ ಖಾಸಗಿ ಮಾಹಿತಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅವರ ಫೋಟೋಗಳನ್ನು ಸಂಬಂಧಿಕರು ಹಾಗೂ ಗ್ರಾಮಸ್ಥರಿಗೆ ಹಂಚುವ ಮೂಲಕ ಸಮಾಜದಲ್ಲಿ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.
ಬಡ್ಡಿ ದಂಧೆಕೋರರು ಕೇವಲ ಫೋನ್ ಮೂಲಕ ಬೆದರಿಕೆ ಹಾಕುವುದಷ್ಟೇ ಅಲ್ಲದೆ, ಮನೆಗೆ ನುಗ್ಗಿ ಗಲಾಟೆ ಮಾಡಿ ಮಾನಸಿಕವಾಗಿ ಹಿಂಸಿಸುತ್ತಿದ್ದರು. ಈ ಅವಮಾನವನ್ನು ಸಹಿಸಲಾರದೆ ನೊಂದ ಗೌರವ್ವ ಅವರು ಗ್ರಾಮದ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.
DMI ಫೈನಾನ್ಸ್, HDB ಸೇರಿದಂತೆ ಕಿರುಕುಳ ನೀಡುತ್ತಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅನಿಗೋಳ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸದ್ಯ ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.


