ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಕ್ನಾಲಜಿ ಹೆಚ್ಚಾದರೂ ಸಮಸ್ಯೆಯೇ, ಕಡಿಮೆಯಾದರೂ ಸಮಸ್ಯೆಯೇ! ಆದರೆ ಅದನ್ನು ಬಳಸುವ ಬುದ್ಧಿ ಮನುಷ್ಯರಿಗೆ ಖಂಡಿತಾ ಇದೆ. ಟೆಕ್ನಾಲಜಿ ಬಳಸಿ ಮಧ್ಯರಾತ್ರಿ ಇಲಿಪಾಷಾಣ ಆರ್ಡರ್ ಮಾಡಿದ ಮಹಿಳೆಗೆ ನಿಮಿಷಗಳಲ್ಲೇ ವಿಷ ಸಿಕ್ಕಿದೆ. ಆದರೆ ತಂದುಕೊಟ್ಟಿದ್ದು ಮನುಷ್ಯನಲ್ಲವೇ? ಎದುರಿನ ವ್ಯಕ್ತಿಯನ್ನು ಸಾಯೋಕೆ ಬಿಡ್ತಾರಾ?
ಹೌದು, ಚೆನ್ನೈನಲ್ಲಿ ಬ್ಲಿಂಕಿಟ್ ಮೂಲಕ ಮಹಿಳೆಯೊಬ್ಬರು ಇಲಿ ಪಾಷಾಣ ಆರ್ಡರ್ ಮಾಡಿದ್ದಾರೆ. ಮಧ್ಯರಾತ್ರಿ ಇಂತಹ ಆರ್ಡರ್ ಸಿಕ್ಕಿದ್ದಕ್ಕೆ ಡೆಲಿವರಿ ಬಾಯ್‌ಗೆ ಅನುಮಾನ ಮೂಡಿದೆ. ವಸ್ತುವನ್ನು ಡೆಲಿವರಿ ಮಾಡೋಕೆ ಹೋದ ವೇಳೆ ಆತನ ಅನುಮಾನ ನಿಜವಾಗಿದೆ.
ಡೆಲಿವರಿ ನೀಡಲು ಹೋದಾಗ ಮನೆಯ ಬಾಗಿಲು ತೆರೆದ ಮಹಿಳೆ ತೀವ್ರವಾಗಿ ಅಳುತ್ತಿರುವುದು ಕಂಡು ಬಂದಿದೆ. ಇದನ್ನು ಗಮನಿಸಿದ ಡೆಲಿವರಿ ಬಾಯ್, ಸುಮ್ಮನೆ ಆರ್ಡರ್ ನೀಡಿ ಅಲ್ಲಿಂದ ಹೊರಗೆ ಹೋಗದೆ, ಆಕೆಯ ಬಳಿ ಹೋಗಿ ಮಾತನಾಡಿಸಿದ್ದಾರೆ.
ಸಮಸ್ಯೆ ಏನೇ ಇರಲಿ, ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಜೀವ ಅಮೂಲ್ಯವಾದುದು. ಕಷ್ಟದ ಕ್ಷಣಗಳು ಶಾಶ್ವತವಲ್ಲ, ಅವು ಕಳೆದು ಹೋಗುತ್ತವೆ ಎಂದು ಸಮಾಧಾನಪಡಿಸಿದ್ದಾರೆ.
ಮಹಿಳೆ ಮೊದಲು ತಾನು ಇಲಿಗಳನ್ನು ಕೊಲ್ಲಲು ಇದನ್ನು ತರಿಸಿದ್ದಾಗಿ ಸುಳ್ಳು ಹೇಳಿದರೂ, ಸಮಯಪ್ರಜ್ಞೆ ಮೆರೆದ ಯುವಕ ಅದನ್ನು ನಂಬದೆ. “ನಿಜವಾಗಿಯೂ ಇಲಿ ಕಾಟವಿದ್ದರೆ ಸಂಜೆ ಅಥವಾ ಮರುದಿನ ಆರ್ಡರ್ ಮಾಡುತ್ತಿದ್ದಿರಿ, ಈ ಸಮಯದಲ್ಲಿ ಆರ್ಡರ್ ಮಾಡುವ ಅಗತ್ಯವಿರಲಿಲ್ಲ ಎಂದು ಪ್ರಶ್ನಿಸಿ ಆಕೆಯ ಮನವೊಲಿಸಿದ್ದಾರೆ.
ಬಳಿಕ ಆರ್ಡರ್ ಕ್ಯಾನ್ಸಲ್ ಮಾಡಿ, ವಿಷದ ಪ್ಯಾಕೆಟ್‌ಗಳನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಈ ಘಟನೆಯನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇಂದು ನಾನು ಏನೋ ಒಂದು ದೊಡ್ಡ ಸಾಧನೆ ಮಾಡಿದ ತೃಪ್ತಿ ಇದೆ ಎಂದು ಬರೆದುಕೊಂಡಿದ್ದಾನೆ. ಸದ್ಯ ಈತನ ಈ ಕಾರ್ಯಕ್ಕೆ ನೆಟ್ಟಿಗರು ‘ರಿಯಲ್ ಹೀರೋ’ ಎಂದು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

