ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯೊಬ್ಬರನ್ನು ಕ್ರೂರವಾಗಿ ಹತ್ಯೆಗೈದು ಶವವನ್ನು ಕಸದ ರಾಶಿಯಲ್ಲಿ ಎಸೆದಿರುವ ಘಟನೆ ಕೆಂಗೇರಿಯ ಮೈಲ್ಸಂದ್ರ ಬಸ್ ನಿಲ್ದಾಣದ ಹಿಂಭಾಗದಲ್ಲಿ ನಡೆದಿದೆ.
ಮಹದೇಶ್ವರ ಬಡಾವಣೆಯ ನಿವಾಸಿ ಕೆಂಪಮ್ಮ (45) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಬೆಳಿಗ್ಗೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಥಳೀಯರು ಕಸದ ರಾಶಿಯಲ್ಲಿ ಶವ ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆಯ ತಲೆಗೆ ಭಾರವಾದ ವಸ್ತುವಿನಿಂದ ಬಲವಾಗಿ ಹೊಡೆದು ಹತ್ಯೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಶವ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದು, ಕೊಲೆ ಇದೇ ಸ್ಥಳದಲ್ಲಿ ನಡೆದಿದೆಯೇ ಅಥವಾ ಬೇರೆಡೆ ನಡೆಸಿ ಇಲ್ಲಿ ತಂದು ಎಸೆದಿರುವ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಹಳೆಯ ವೈಷಮ್ಯ ಅಥವಾ ಹಣಕಾಸಿನ ವಿಷಯದಲ್ಲಿ ಈ ಘಟನೆ ನಡೆದಿರಬಹುದೆಂದು ಶಂಕಿಸಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.



