ಹೊಸದಿಗಂತ ಡಿಜಿಟಲ್ ಡೆಸ್ಕ್:
ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ನಗರಿ ಬೆಂಗಳೂರಿನಲ್ಲಿ ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ಉದ್ಯೋಗ, ಹಣಕಾಸು ಮತ್ತು ಸಂಬಂಧಗಳ ಸಂಘರ್ಷಗಳು ತೀವ್ರ ಪರಿಣಾಮ ಬೀರುತ್ತಿವೆ. ಆದಿತ್ಯ ಬಿರ್ಲಾ ಶಿಕ್ಷಣ ಟ್ರಸ್ಟ್‌ನ ಅಂಗಸಂಸ್ಥೆಯಾದ ‘ಎಂಪವರ್’ ನಡೆಸಿದ ಬೃಹತ್ ಸಮೀಕ್ಷೆಯಲ್ಲಿ ಈ ಅಂಶಗಳು ಬೆಳಕಿಗೆ ಬಂದಿವೆ.
ಸುಮಾರು 29,801 ಮಹಿಳೆಯರನ್ನು ಒಳಗೊಂಡ ಈ ಸಮೀಕ್ಷೆಯು ವಿವಿಧ ಹಂತದ ಸವಾಲುಗಳನ್ನು ಎತ್ತಿ ತೋರಿಸಿದೆ:
ಹದಿಹರೆಯದವರು (18 ವರ್ಷದೊಳಗಿನವರು): ಸುಮಾರು 17,102 ಹೆಣ್ಣು ಮಕ್ಕಳು ಭಾಗವಹಿಸಿದ್ದು, ಇವರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಶಾಲೆ ಮತ್ತು ಸಮುದಾಯ ಮಟ್ಟದಲ್ಲಿ ಇವರಿಗೆ ಆರಂಭಿಕ ಮಾರ್ಗದರ್ಶನದ ಅಗತ್ಯವಿದೆ.
ಯುವತಿಯರು (18-25 ವರ್ಷ): ಶಿಕ್ಷಣದ ಒತ್ತಡ, ವೃತ್ತಿಜೀವನದ ಅನಿಶ್ಚಿತತೆ ಮತ್ತು ಸಂಬಂಧಗಳಲ್ಲಿನ ಏರಿಳಿತಗಳು ಇವರನ್ನು ಕಾಡುತ್ತಿವೆ.
ಉದ್ಯೋಗಸ್ಥ ಮಹಿಳೆಯರು (26-49 ವರ್ಷ): ಕೆಲಸದ ಒತ್ತಡ ಮತ್ತು ಕೌಟುಂಬಿಕ ಜವಾಬ್ದಾರಿಗಳ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಇವರಿಗೆ ದೊಡ್ಡ ಸವಾಲಾಗಿದೆ. ಹಣಕಾಸಿನ ಅಸ್ಥಿರತೆ ಇವರ ಆತಂಕಕ್ಕೆ ಮುಖ್ಯ ಕಾರಣ.
ಹಿರಿಯರು (50 ವರ್ಷ ಮೇಲ್ಪಟ್ಟವರು): ಈ ವಯಸ್ಸಿನ ಮಹಿಳೆಯರಲ್ಲಿ ಒಂಟಿತನ ಮತ್ತು ಕುಟುಂಬದ ರಚನೆಯಲ್ಲಿನ ಬದಲಾವಣೆಗಳು ಭಾವನಾತ್ಮಕ ಕುಸಿತಕ್ಕೆ ಕಾರಣವಾಗುತ್ತಿವೆ.
ಆದಿತ್ಯ ಬಿರ್ಲಾ ಶಿಕ್ಷಣ ಟ್ರಸ್ಟ್‌ನ ಸಂಸ್ಥಾಪಕಿ ನೀರ್ಜಾ ಬಿರ್ಲಾ ಅವರು ಮಾತನಾಡಿ, “ಮಹಿಳೆಯರ ಮಾನಸಿಕ ಆರೋಗ್ಯವು ಕೇವಲ ಅವರ ವೈಯಕ್ತಿಕ ವಿಷಯವಲ್ಲ; ಅದು ಸಮಾಜ, ಉದ್ಯೋಗ ಮತ್ತು ಕುಟುಂಬಕ್ಕೆ ಸಂಬಂಧಿಸಿದ್ದು. ಮಹಿಳೆಯರು ಮುಕ್ತವಾಗಿ ಸಹಾಯ ಕೇಳುವಂತಹ ವಾತಾವರಣವನ್ನು ನಾವು ನಿರ್ಮಿಸಬೇಕು,” ಎಂದು ಕರೆ ನೀಡಿದ್ದಾರೆ.
ದಕ್ಷಿಣ ಭಾರತದಾದ್ಯಂತ ಯುವ ವೃತ್ತಿಪರರಲ್ಲಿ ವೃತ್ತಿಜೀವನದ ಒತ್ತಡ ಮತ್ತು ಭಾವನಾತ್ಮಕ ಕೊರತೆ ಹೆಚ್ಚುತ್ತಿರುವುದು ತಜ್ಞರ ಕಳವಳಕ್ಕೆ ಕಾರಣವಾಗಿದೆ. 2026ರ ‘ಎಂಪವರಿಂಗ್ ಮೈಂಡ್ಸ್’ ಕಾರ್ಯಕ್ರಮದಲ್ಲಿ, ಉದ್ಯೋಗ ಸ್ಥಳಗಳಲ್ಲಿ ಮಹಿಳಾ ಸ್ನೇಹಿ ಪಾಲಿಸಿಗಳನ್ನು ರೂಪಿಸಲು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೌನ್ಸಿಲಿಂಗ್ ಕೇಂದ್ರಗಳನ್ನು ಬಲಪಡಿಸಲು ಒತ್ತಾಯಿಸಲಾಗಿದೆ.



