ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶದ ಎಲ್ಲಾ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ಏಕೈಕ ಮಾರ್ಗವೆಂದರೆ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆಯನ್ನು (UCC) ಜಾರಿಗೆ ತರುವುದು ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಆರ್ ಮಹದೇವನ್ ಮತ್ತು ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ, ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅಡಿಯಲ್ಲಿ ಮಹಿಳೆಯರ ಹಕ್ಕುಗಳ ಉಲ್ಲಂಘನೆಯನ್ನು ಆರೋಪಿಸಿ ಒಂದು ಬ್ಯಾಚ್ ಅರ್ಜಿಯ ವಿಚಾರಣೆ ನಡೆಸುತ್ತಿರುವ ವೇಳೆ ಈ ಅಭಿಪ್ರಾಯವ್ಯಕ್ತಪಡಿಸಿದೆ.
ಶರಿಯಾ ಕಾನೂನಿನ ಉತ್ತರಾಧಿಕಾರದ ನಿಬಂಧನೆಯನ್ನು ತೆಗೆದುಹಾಕಿದರೆ, ಯಾವ ಕಾನೂನು ಉತ್ತರಾಧಿಕಾರವನ್ನು ನಿಯಂತ್ರಿಸಬೇಕು? ಏಕರೂಪ ನಾಗರಿಕ ಸಂಹಿತೆ ಸರಿಯಾದ ಉತ್ತರವಾಗಿದೆ. ದೇಶದ ಎಲ್ಲಾ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಇರುವ ಒಂದೇ ಮಾರ್ಗವೆಂದರೆ ಭಾರತದಾದ್ಯಂತ ಏಕರೂಪ ಸಂಹಿತೆ ಜಾರಿಗೆ ತರುವುದು ಎಂದು ಹೇಳಿದೆ.
ಅರ್ಜಿದಾರರ ಪರ ವಾದಿಸಿದ ವಕೀಲ ಪ್ರಶಾಂತ್ ಭೂಷಣ್, ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಸಂವಿಧಾನದ 25 ನೇ ವಿಧಿಯಡಿ ಉತ್ತರಾಧಿಕಾರಕ್ಕೆ ಸಂಬಂಧಿಸಿದ ವೈಯಕ್ತಿಕ ಕಾನೂನನ್ನು ರಕ್ಷಿಸಲಾಗುವುದಿಲ್ಲ. ಶಾಯರಾ ಬಾನೋ ತೀರ್ಪಿನ ನಂತರ ದೇಶದಲ್ಲಿ ಈಗ ಆ ಪರಿಸ್ಥಿತಿ ಹೊಂದಲು ಸಾಧ್ಯವಿಲ್ಲ.ಮುಸ್ಲಿಂ ಮಹಿಳೆಯರಿಗೆ ಮುಸ್ಲಿಂ ಪುರುಷರಿಗೆ ಇರುವಂತೆ ಸಮಾನವಾದ ಹಕ್ಕುಗಳು ಇರುವುದಿಲ್ಲ ಎಂದು ಹೇಳಿದರು.
ಅಂತಿಮವಾಗಿ ವಾದಗಳನ್ನು ಆಲಿಸಿದ ನ್ಯಾಯಾಲಯವು, ಶರಿಯತ್ ಉತ್ತರಾಧಿಕಾರದ ನಿಬಂಧನೆಗಳನ್ನು ರದ್ದುಗೊಳಿಸಿದರೆ ಪರಿಹಾರಗಳೇನು ಎಂಬ ಸಲಹೆಗಳನ್ನು ಸೇರಿಸಲು ಅರ್ಜಿಯನ್ನು ತಿದ್ದುಪಡಿ ಮಾಡಲು ಸೂಚಿಸಿತು. ಭೂಷಣ್ ಅವರು ಅರ್ಜಿಯನ್ನು ತಿದ್ದುಪಡಿ ಮಾಡಲು ಒಪ್ಪಿದ ನಂತರ ಪೀಠವು ಮುಂದಿನ ವಿಚಾರಣೆಯನ್ನು ಮತ್ತೊಂದು ದಿನಾಂಕಕ್ಕೆ ಮುಂದೂಡಿತು.



