Friday, September 5, 2025

ಮಹಿಳಾ ಹಾಕಿ ಏಷ್ಯಾಕಪ್: ಥೈಲ್ಯಾಂಡ್ ವಿರುದ್ಧ ಗೆಲುವಿನ ಶುಭಾರಂಭ ಮಾಡಿದ ಭಾರತೀಯ ಟೀಮ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದಲ್ಲಿ ಇಂದಿನಿಂದ ಮಹಿಳಾ ಹಾಕಿ ಏಷ್ಯಾಕಪ್ ಆರಂಭವಾಗಿದೆ. ಈ ಟೂರ್ನಿಯಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ತನ್ನ ಮೊದಲ ಪಂದ್ಯದಲ್ಲಿ ಥೈಲ್ಯಾಂಡ್ ತಂಡವನ್ನು 11-0 ಗೋಲುಗಳಿಂದ ಸೋಲಿಸಿ ಗೆಲುವಿನ ಶುಭಾರಂಭ ಮಾಡಿದೆ.

ಗೊಂಗ್ಶು ಕೆನಾಲ್ ಸ್ಪೋರ್ಟ್ಸ್ ಪಾರ್ಕ್ ಹಾಕಿ ಫೀಲ್ಡ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ ಆಕ್ರಮಣಕಾರಿಯಾಗಿ ಆಟವಾಡಿ ಥೈಲ್ಯಾಂಡ್ ತಂಡವನ್ನು ಏಕಪಕ್ಷೀಯ ರೀತಿಯಲ್ಲಿ ಸೋಲಿಸಿತು.

ಭಾರತ ಆರಂಭದಿಂದಲೂ ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡಿತು. ಮುಮ್ತಾಜ್ ಖಾನ್, ಉದಿತಾ ಮತ್ತು ಬ್ಯೂಟಿ ಡಂಗ್ ಡಂಗ್ ತಲಾ ಎರಡು ಗೋಲುಗಳನ್ನು ಗಳಿಸಿದರೆ, ಸಂಗೀತಾ ಕುಮಾರಿ, ನವನೀತ್ ಕೌರ್, ಲಾಲ್ರೆಮ್ಸಿಯಾಮಿ, ಶರ್ಮಿಳಾ ದೇವಿ ಮತ್ತು ರುತುಜಾ ದಾದಾಸೊ ಪಿಸಲ್ ತಲಾ ಒಂದು ಗೋಲು ಬಾರಿಸಿದರು. ಹೀಗಾಗಿ ಮೊದಲಾರ್ಧದಲ್ಲಿ ಭಾರತ 5-0 ಮುನ್ನಡೆ ಸಾಧಿಸಿತು. ಇದರ ನಂತರ, ದ್ವಿತೀಯಾರ್ಧದಲ್ಲಿಯೂ ಪಾರುಪತ್ಯ ಮುಂದುವರೆಸಿದ ಭಾರತ ಪಂದ್ಯದ ಅಂತ್ಯದ ವೇಳೆಗೆ 11 ಗೋಲುಗಳನ್ನು ಗಳಿಸಿತು.

ಭಾರತ ತಂಡವು ಏಷ್ಯಾಕಪ್ ಚಾಂಪಿಯನ್ ಜಪಾನ್, ಥೈಲ್ಯಾಂಡ್ ಮತ್ತು ಸಿಂಗಾಪುರ್ ತಂಡಗಳನ್ನು ಒಳಗೊಂಡ ಪೂಲ್ ಬಿ ನಲ್ಲಿ ಸ್ಥಾನ ಪಡೆದಿದ್ದರೆ, ಪೂಲ್ ಎ ನಲ್ಲಿ ಆತಿಥೇಯ ಚೀನಾ, ಕೊರಿಯಾ, ಮಲೇಷ್ಯಾ ಮತ್ತು ಚೈನೀಸ್ ತೈಪೆ ತಂಡಗಳು ಸ್ಥಾನ ಪಡೆದಿವೆ. ಈ ಪಂದ್ಯಾವಳಿಯು ಸೆಪ್ಟೆಂಬರ್ 5 ರಿಂದ 14, 2025 ರವರೆಗೆ ನಡೆಯಲಿದೆ. ಥೈಲ್ಯಾಂಡ್ ನಂತರ, ಭಾರತವು ಈಗ ಶನಿವಾರ ಜಪಾನ್ ಮತ್ತು ಸೆಪ್ಟೆಂಬರ್ 8 ರಂದು ಸಿಂಗಾಪುರವನ್ನು ಎದುರಿಸಲಿದೆ.

ಇದನ್ನೂ ಓದಿ