ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯು ಮೊದಲ ಸುತ್ತಿನ ಮುಕ್ತಾಯದ ಹಂತ ತಲುಪಿದ್ದು, ಲೀಗ್ ಹಂತದ 20 ಪಂದ್ಯಗಳು ಪೂರ್ಣಗೊಂಡಿವೆ. ಈ ಹಂತದಲ್ಲಿ ನಿರೀಕ್ಷೆಯಂತೆಯೇ ಮೂರು ಬಲಿಷ್ಠ ತಂಡಗಳು ಈಗಾಗಲೇ ಸೆಮಿಫೈನಲ್‌ಗೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಅವುಗಳೆಂದರೆ…
ಅಜೇಯ ಓಟಗಾರರ ಆಸ್ಟ್ರೇಲಿಯಾ (9 ಅಂಕ)
ಈ ಬಾರಿಯ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡವು ಭರ್ಜರಿ ಪ್ರದರ್ಶನ ನೀಡುವ ಮೂಲಕ ಅಬ್ಬರಿಸಿದೆ. ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿರುವ ಆಸೀಸ್ ಪಡೆ, ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಗೆ ರದ್ದಾದ ಕಾರಣ ಒಂದು ಅಂಕದೊಂದಿಗೆ ಒಟ್ಟು 9 ಅಂಕಗಳನ್ನು ಗಳಿಸಿದೆ. ಈ ಅಂಕಗಳೊಂದಿಗೆ, ಆಸ್ಟ್ರೇಲಿಯಾ ಈಗಾಗಲೇ ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಇಂಗ್ಲೆಂಡ್‌ನ ಅಜೇಯ ನಾಗಾಲೋಟ (9 ಅಂಕ)
ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ವಿಶ್ವಕಪ್ ಅಭಿಯಾನ ಆರಂಭಿಸಿದ ಇಂಗ್ಲೆಂಡ್ ತಂಡವು ಇದುವರೆಗೆ ಸೋಲಿನ ರುಚಿ ಕಂಡಿಲ್ಲ. ಆಡಿದ 4 ಪಂದ್ಯಗಳಲ್ಲೂ ಗೆಲುವು ದಾಖಲಿಸಿರುವ ಇಂಗ್ಲೆಂಡ್, ಪಾಕಿಸ್ತಾನ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ ಒಂದು ಅಂಕ ಪಡೆದು ಒಟ್ಟು 9 ಅಂಕಗಳೊಂದಿಗೆ ಸೆಮಿಫೈನಲ್ ಟಿಕೆಟ್ ಖಚಿತಪಡಿಸಿಕೊಂಡಿದೆ.
ಕಮ್‌ಬ್ಯಾಕ್ ಹೀರೋ ಸೌತ್ ಆಫ್ರಿಕಾ (8 ಅಂಕ)
ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಸೋತರೂ, ಅದ್ಭುತ ಕಮ್‌ಬ್ಯಾಕ್ ಮಾಡಿದ ಸೌತ್ ಆಫ್ರಿಕಾ ಆ ಬಳಿಕ ಬ್ಯಾಕ್ ಟು ಬ್ಯಾಕ್ 4 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ ಒಟ್ಟು 8 ಅಂಕಗಳೊಂದಿಗೆ ಸೆಮಿಫೈನಲ್‌ಗೆ ಪ್ರವೇಶಿಸಿದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಾಲ್ಕನೇ ಸೆಮಿಫೈನಲ್ ಸ್ಪಾಟ್‌ಗೆ ಭಾರೀ ಪೈಪೋಟಿ!
ಸೆಮಿಫೈನಲ್‌ನ ನಾಲ್ಕನೇ ಸ್ಥಾನಕ್ಕಾಗಿ ಈಗ ತೀವ್ರ ಹಣಾಹಣಿ ಶುರುವಾಗಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಈ ಸ್ಥಾನಕ್ಕಾಗಿ ಭಾರತ, ನ್ಯೂಜಿಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಲಿವೆ. ಎಲ್ಲಾ ತಂಡಗಳಿಗೂ ಇನ್ನೂ ತಲಾ 2 ಪಂದ್ಯಗಳು ಬಾಕಿ ಉಳಿದಿದ್ದು, ಈ ಮಹತ್ವದ ಪಂದ್ಯಗಳಲ್ಲಿ ಯಾರು ಗೆದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿ ಸೆಮಿಫೈನಲ್‌ಗೆ ಲಗ್ಗೆ ಇಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.