ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರುವ 2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ಟಿಕೆಟ್ ಮಾರಾಟ ಪ್ರಾರಂಭವಾಗಿದೆ. ಸೆಪ್ಟೆಂಬರ್ 30 ರಿಂದ ನವೆಂಬರ್ 2 ರವರೆಗೆ ನಡೆಯಲಿರುವ ಈ ಮಹತ್ತರ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಐಸಿಸಿ ಪ್ರಕಟಣೆಯ ಪ್ರಕಾರ, ಟಿಕೆಟ್‌ಗಳ ದರ ಕೇವಲ 100 ರೂಪಾಯಿಯಿಂದ ಪ್ರಾರಂಭವಾಗುತ್ತಿದ್ದು, ಇದು ಒಂದು ಕಪ್ ಕಾಫಿಗಿಂತಲೂ ಅಗ್ಗವಾಗಿದೆ. ಸೆಪ್ಟೆಂಬರ್ 4ರಿಂದ 8ರವರೆಗೆ ಗೂಗಲ್ ಪೇ ಗ್ರಾಹಕರಿಗೆ ವಿಶೇಷ ಪೂರ್ವ-ಮಾರಾಟ ಅವಕಾಶ ನೀಡಲಾಗಿದ್ದು, ಬಳಿಕ ಸೆಪ್ಟೆಂಬರ್ 9ರಿಂದ ಎಲ್ಲರಿಗೂ ಟಿಕೆಟ್ ಲಭ್ಯವಾಗಲಿದೆ. ಇದೇ ವೇಳೆ, ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಹಾಡುಗಳೊಂದಿಗೆ ಅಭಿಮಾನಿಗಳನ್ನು ರಂಜಿಸಲಿದ್ದಾರೆ.
ಸೆಪ್ಟೆಂಬರ್ 30ರಂದು ಭಾರತ-ಶ್ರೀಲಂಕಾ ನಡುವಿನ ಉದ್ಘಾಟನಾ ಪಂದ್ಯದಿಂದ ವಿಶ್ವಕಪ್‌ಗೆ ಚಾಲನೆ ಸಿಗಲಿದ್ದು, ಫೈನಲ್ ನವೆಂಬರ್ 2ರಂದು ನಡೆಯಲಿದೆ. ಅಭಿಮಾನಿಗಳ ಉತ್ಸಾಹ ಈಗಾಗಲೇ ಎಲ್ಲೇ ಮೀರಿದೆ.
ವಿಶ್ವಕಪ್‌ನ ಹೆಚ್ಚಿನ ಪಂದ್ಯಗಳು ಭಾರತದಲ್ಲಿ ನಡೆಯಲಿದ್ದು, ಪಾಕಿಸ್ತಾನ ತಂಡ ಮಾತ್ರ ಶ್ರೀಲಂಕಾದಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ಪಾಕಿಸ್ತಾನ ಸೆಮಿಫೈನಲ್ ಮತ್ತು ಫೈನಲ್ ತಲುಪಿದರೆ, ಆ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಾಗುತ್ತದೆ. ಪಾಕಿಸ್ತಾನ ಲೀಗ್ ಹಂತದಿಂದಲೇ ಹೊರಬಿದ್ದರೆ, ಫೈನಲ್ ಭಾರತದಲ್ಲೇ ನಡೆಯಲಿದೆ. ಭಾರತ ಮತ್ತು ಶ್ರೀಲಂಕಾ ಹೊರತುಪಡಿಸಿ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಇಂಗ್ಲೆಂಡ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ.