ಹೊಸದಿಗಂತ ವರದಿ ಭಟ್ಕಳ:
ತಾಲೂಕಿನ ಉತ್ತರಕೊಪ್ಪ ಗಾಳಿಬೈಲು ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಕಾರ್ಮಿಕನೊಬ್ಬ ಆಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತನನ್ನು ಅಪ್ಪಾಚಿ (೬೧) ತಂದೆ ಜೋನೇಪ್ ಎಂದು ಗುರುತಿಸಲಾಗಿದೆ. ಈತ ಭಟ್ಕಳದ ಅಮಿತ ಶಾನಭಾಗ ಅವರ ತೋಟದಲ್ಲಿ ಕಾರ್ಮಿಕರಾಗಿದ್ದ. ಕಳೆದ ಕೆಲ ತಿಂಗಳಿಂದ ಒಂದು ಕಣ್ಣು ಕಾಣದೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಅವಿವಾಹಿತರಾಗಿದ್ದು ಹತ್ತಿರದ ಸಂಬಂಧಿಕರು ಯಾರೂ ಇಲ್ಲದಿರುವುದರಿಂದ ಮಾನಸಿಕವಾಗಿ ಕುಗ್ಗಿದ್ದರೆಂದು ತಿಳಿದುಬಂದಿದೆ.
ತಾವು ವಾಸಿಸುತ್ತಿದ್ದ ಮನೆಯಲ್ಲಿ ವಿಷಕಾರಿ ಆಸಿಡ್ ಸೇವಿಸಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಕುರಿತು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ಪೊಲೀಸರು ಮೃತದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು. ಮೃತರಿಗೆ ಸಂಬಂಧಿಕರು ಯಾರೂ ಇಲ್ಲದ ಹಿನ್ನೆಲೆಯಲ್ಲಿ ತೋಟದ ಮಾಲೀಕ ಅಮಿತ ಶಾನಭಾಗ ಅವರು ಸಮಾಜ ಸೇವಕ ಮಂಜು ನಾಯ್ಕ ಅವರಲ್ಲಿ ಅಂತ್ಯಕ್ರಿಯೆಗೆ ಸಹಕಾರ ಕೋರಿದಂತೆ ಅಂಬುಲೆನ್ಸ್ ಮಾಲೀಕ ವಿನಾಯಕ ನಾಯ್ಕ ಹಾಗೂ ಉತ್ತರ ಕೊಪ್ಪದ ಸ್ಥಳೀಯ ನಿವಾಸಿಗಳ ನೆರವಿನಿಂದ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.



