ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ 2025ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಭರ್ಜರಿ ಗೆಲುವು ದಾಖಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಯಶಸ್ಸಿನೊಂದಿಗೆ ಭಾರತಕ್ಕೆ ಕನಿಷ್ಠ ಕಂಚಿನ ಪದಕ ಖಚಿತವಾಗಿದ್ದು, ಫೈನಲ್ ಪ್ರವೇಶಿಸುವ ಕನಸಿನತ್ತ ಜೋಡಿ ಮುನ್ನುಗ್ಗಿದೆ. 2022ರಲ್ಲಿ ಇದೇ ಜೋಡಿ ಸೆಮಿಫೈನಲ್‌ಗೆ ತಲುಪಿದಾಗ ಕಂಚಿನ ಪದಕ ಗೆದ್ದಿದ್ದರು.
ಕ್ವಾರ್ಟರ್ ಫೈನಲ್‌ನಲ್ಲಿ ಮಲೇಷ್ಯಾದ ಜೋಡಿ ಆರನ್ ಚಿಯಾ ಮತ್ತು ಸೋಹ್ ವೂಯಿ ಯಿಕ್ ವಿರುದ್ಧ ಸಾತ್ವಿಕ್-ಚಿರಾಗ್ ಅಜೇಯ ಆಟ ತೋರಿದರು. ಮೊದಲ ಸೆಟ್‌ನಲ್ಲಿ 21-12 ಅಂತರದ ಗೆಲುವು ಸಾಧಿಸಿದ ಅವರು, ಎರಡನೇ ಸೆಟ್‌ನಲ್ಲಿ 21-19 ಅಂಕಗಳ ಹೋರಾಟದೊಂದಿಗೆ ನೇರ ಸೆಟ್‌ಗಳಲ್ಲಿ ಪಂದ್ಯ ಮುಗಿಸಿದರು. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇದೇ ಜೋಡಿಯಿಂದ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡರು.
ಸಾತ್ವಿಕ್-ಚಿರಾಗ್ ಜೋಡಿ ಭಾರತದ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಹಲವು ಐತಿಹಾಸಿಕ ಕ್ಷಣಗಳನ್ನು ಬರೆಯುತ್ತಿದೆ. 2023ರಲ್ಲಿ ದುಬೈನಲ್ಲಿ ನಡೆದ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಚಿನ್ನದ ಪದಕ ಗೆದ್ದು, ಭಾರತದ ಡಬಲ್ಸ್ ವಿಭಾಗಕ್ಕೆ ಮೊದಲ ಬಾರಿಗೆ ಬಂಗಾರದ ಕೀರ್ತಿಯನ್ನು ತಂದುಕೊಟ್ಟಿದ್ದರು. ಈ ಸಾಧನೆ 52 ವರ್ಷಗಳ ನಿರೀಕ್ಷೆಗೆ ತೆರೆ ಎಳೆದಿತ್ತು.
ಈಗ ವಿಶ್ವ ಚಾಂಪಿಯನ್‌ಶಿಪ್ ವೇದಿಕೆಯಲ್ಲಿ ಜೋಡಿ ಮತ್ತೊಮ್ಮೆ ಭಾರತಕ್ಕೆ ಹೊಸ ಇತಿಹಾಸ ಬರೆಯುವ ಹಾದಿಯಲ್ಲಿದೆ. ಮುಂದಿನ ಸೆಮಿಫೈನಲ್‌ನಲ್ಲಿ ಅವರು ಚೀನಾದ ಲಿ ಯಿಯು ಮತ್ತು ಬೊ ಯಾಂಗ್ ಚೆನ್ ವಿರುದ್ಧ ಸೆಣಸಲಿದ್ದಾರೆ. ಈ ಹಂತದಲ್ಲಿ ಗೆದ್ದರೆ ಭಾರತಕ್ಕೆ ಬೆಳ್ಳಿ ಪದಕ ಖಚಿತವಾಗಲಿದೆ.