ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರ ಮಹಿಳಾ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡವು ಅಪ್ರತಿಮ ಪ್ರದರ್ಶನ ನೀಡಿದ್ದು, ಬಲಿಷ್ಠ ಇಂಗ್ಲೆಂಡ್ ತಂಡವನ್ನು 125 ರನ್‌ಗಳ ಅಂತರದಿಂದ ಸೋಲಿಸಿ ಇತಿಹಾಸ ನಿರ್ಮಿಸಿದೆ. ಬುರ್ಸಪರಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಈ ರೋಚಕ ಪಂದ್ಯದಲ್ಲಿ ಆಫ್ರಿಕಾ ನಾಯಕಿ ಲಾರಾ ವೋಲ್ವಾರ್ಡ್ ಅವರ ಅದ್ಭುತ ಶತಕ ತಂಡದ ಗೆಲುವಿನ ಮೂಲ ಕಾರಣವಾಯಿತು. ಈ ಗೆಲುವಿನಿಂದ ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಮೊದಲು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ ತಂಡವು 50 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 319 ರನ್ ಕಲೆಹಾಕಿತು. ನಾಯಕಿ ಲಾರಾ ವೋಲ್ವಾರ್ಡ್ ಕೇವಲ 143 ಎಸೆತಗಳಲ್ಲಿ 20 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 169 ರನ್ ಸಿಡಿಸಿ ಇಂಗ್ಲೆಂಡ್ ಬೌಲರ್‌ಗಳನ್ನು ಪರದಾಡಿಸಿದರು. ಅವರ ಜೊತೆಗೆ ಟ್ಯಾಡ್ಮಿನ್ ಬ್ರಿಟ್ಸ್ 45 ರನ್ ಹಾಗೂ ಮರಿಜಾನ್ನೆ ಕಪ್ 33 ಎಸೆತಗಳಲ್ಲಿ ವೇಗದ 42 ರನ್ ಗಳಿಸಿದರು. ಇಂಗ್ಲೆಂಡ್ ಪರ ಸೋಫಿ ಎಕ್ಲೆಸ್ಟೋನ್ ನಾಲ್ಕು ವಿಕೆಟ್ ಪಡೆದರೆ, ಲಾರೆನ್ ಬೆಲ್ ಎರಡು ಹಾಗೂ ನ್ಯಾಟ್ ಸಿವರ್ ಬ್ರಂಟ್ ಒಂದು ವಿಕೆಟ್ ಪಡೆದರು.
319 ರನ್‌ಗಳ ಭಾರೀ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಆರಂಭ ಅತ್ಯಂತ ದುರ್ಬಲವಾಗಿತ್ತು. ಆರಂಭದ ಮೂವರು ಬ್ಯಾಟರ್‌ಗಳು ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು. ಇದು ಇಂಗ್ಲೆಂಡ್‌ಗೆ ದೊಡ್ಡ ಆಘಾತವಾಗಿತ್ತು. ಬಳಿಕ ನಾಯಕಿ ನ್ಯಾಟ್ ಸಿವರ್ ಬ್ರಂಟ್ (64) ಮತ್ತು ಎಲಿಸ್ ಕ್ಯಾಪ್ಸಿ (50) ಮಾತ್ರ ಸ್ವಲ್ಪ ಮಟ್ಟಿಗೆ ಹೋರಾಟ ನಡೆಸಿದರೂ ಉಳಿದ ಬ್ಯಾಟರ್‌ಗಳಿಂದ ಸಹಕಾರ ದೊರಕಲಿಲ್ಲ. ಇಂಗ್ಲೆಂಡ್ 42.3 ಓವರ್‌ಗಳಲ್ಲಿ ಕೇವಲ 194 ರನ್‌ಗಳಿಗೆ ಆಲೌಟ್ ಆಯಿತು.
ಆಫ್ರಿಕಾ ಪರ ಬೌಲಿಂಗ್ ವಿಭಾಗದಲ್ಲಿ ಮರಿಜಾನ್ನೆ ಕಪ್ ಐದು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಅವರ ಜೊತೆಗೆ ನಾಡಿನ್ ಡಿ ಕ್ಲರ್ಕ್ ಎರಡು, ಅಯಬೊಂಗಾ ಖಾಕಾ, ಮ್ಲಾಬಾ ಮತ್ತು ಸುನೆ ಲೂಸ್ ತಲಾ ಒಂದು ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವಕಪ್ ಫೈನಲ್‌ಗೆ ತಲುಪಿದೆ. ಈಗ ತಂಡವು ಫೈನಲ್‌ನಲ್ಲಿ ಭಾರತ ಅಥವಾ ಆಸ್ಟ್ರೇಲಿಯಾ ವಿರುದ್ಧ ಕಾದಾಟ ನಡೆಸಲಿದೆ. ಎರಡನೇ ಸೆಮಿಫೈನಲ್ ಪಂದ್ಯವು ಅಕ್ಟೋಬರ್ 30ರಂದು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತ ಗೆದ್ದರೆ ಕ್ರಿಕೆಟ್ ಲೋಕ ಹೊಸ ಚಾಂಪಿಯನ್‌ಗಾಗಿ ಕಾತುರದಿಂದ ಕಾಯುತ್ತಿದೆ.

