ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡದ ದುರ್ಭಾಗ್ಯಕರ ಪ್ರದರ್ಶನ ಮುಂದುವರಿದಿದೆ. ಪುರುಷರ ವಿಶ್ವಕಪ್, ಟಿ20 ವಿಶ್ವಕಪ್ ಅಥವಾ ಚಾಂಪಿಯನ್ಸ್ ಟ್ರೋಫಿ ಎಲ್ಲ ಕಡೆ ಪಾಕ್ ತಂಡ ಮೊದಲ ಸುತ್ತಿನಲ್ಲೇ ಹೊರಬಿದ್ದಿದೆ. ಈಗ ಇದೇ ರೀತಿ ಮಹಿಳಾ ಕ್ರಿಕೆಟ್ ತಂಡವೂ ಕೂಡ. ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025ರಲ್ಲಿ ಫಾತಿಮಾ ಸನಾ ನಾಯಕತ್ವದ ಪಾಕಿಸ್ತಾನ ಮಹಿಳಾ ತಂಡವು ಯಾವುದೇ ಪಂದ್ಯದಲ್ಲಿ ಗೆಲುವು ದಾಖಲಿಸದೆ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿದೆ.
ಕೊನೆಯ ಲೀಗ್ ಪಂದ್ಯದಲ್ಲಾದರೂ ಗೆಲ್ಲುವ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನ ತಂಡಕ್ಕೆ ಅದೃಷ್ಟ ಸಹಕರಿಸಲಿಲ್ಲ. ಅಕ್ಟೋಬರ್ 24ರಂದು ಕೊಲಂಬೊನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯ ಕೇವಲ 4.2 ಓವರ್‌ಗಳ ನಂತರ ಮಳೆಯಿಂದ ರದ್ದುಗೊಂಡಿತು. ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆರಂಭಿಸಿ ಕೇವಲ 18 ರನ್ ಗಳಿಸಿತ್ತು. ಮಳೆ ಬಂದ ಕಾರಣದಿಂದ ಪಂದ್ಯ ಮುಂದುವರಿಯಲಿಲ್ಲ ಮತ್ತು ರದ್ದುಗೊಂಡಿತು.
ಈ ಫಲಿತಾಂಶದಿಂದ ಪಾಕಿಸ್ತಾನವು ಟೂರ್ನಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ಒಂದನ್ನೂ ಗೆಲ್ಲದೆ, ನಾಲ್ಕು ಸೋಲುಗಳನ್ನು ಹಾಗೂ ಮೂರು ಮಳೆ ರದ್ದಾದ ಪಂದ್ಯಗಳನ್ನು ದಾಖಲಿಸಿತು. ಅಂಕಪಟ್ಟಿಯಲ್ಲಿ ಕೇವಲ ಮೂರು ಅಂಕಗಳೊಂದಿಗೆ ಪಾಕಿಸ್ತಾನ ತಂಡ 7ನೇ ಸ್ಥಾನ ಪಡೆದಿದೆ.
ಗಮನಾರ್ಹ ಅಂಶವೇನೆಂದರೆ, ಪಾಕಿಸ್ತಾನ ತಂಡವು ಭಾರತದಲ್ಲಿ ನಡೆಯುವ ವಿಶ್ವಕಪ್ ಪಂದ್ಯಗಳಿಗೆ ಬರಲು ನಿರಾಕರಿಸಿದ್ದರಿಂದ, ಅದರ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲೇ ಆಯೋಜಿಸಲಾಯಿತು. ಬಾಂಗ್ಲಾದೇಶ ವಿರುದ್ಧ ಮೊದಲ ಪಂದ್ಯದಲ್ಲೇ ಸೋಲಿನಿಂದ ಪ್ರಾರಂಭವಾದ ಪಾಕಿಸ್ತಾನ ತಂಡದ ಯಾತ್ರೆ, ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಹೀನಾಯ ಸೋಲುಗಳೊಂದಿಗೆ ಕೊನೆಗೊಂಡಿತು.

