ಹೊಸದಿಗಂತ ಡಿಜಿಟಲ್ ಡೆಸ್ಕ್:
|
ವಿಶ್ವ ಲೆಜೆಂಡ್ಸ್ ಪ್ರೊ ಟಿ20 ಲೀಗ್‌ನ ಆರಂಭಿಕ ಪಂದ್ಯ ಗೋವಾದ 1919 ಸ್ಪೋರ್ಟ್‌ಜ್ ಸ್ಟೇಡಿಯಂನಲ್ಲಿ ನಡೆಯಿತು. ಮೊದಲ ಪಂದ್ಯವೇ ಅಭಿಮಾನಿಗಳನ್ನು ಬೆರಗುಗೊಳಿಸುವಂತಹ ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ದೆಹಲಿ ವಾರಿಯರ್ಸ್ ತಂಡ ದುಬೈ ರಾಯಲ್ಸ್ ತಂಡವನ್ನು ಮಣಿಸುವ ಮೂಲಕ ಲೀಗ್‌ಗೆ ಭರ್ಜರಿ ಆರಂಭ ನೀಡಿತು. ಮೊದಲ ದಿನವೇ ಒಟ್ಟು 394 ರನ್‌ಗಳು ದಾಖಲಾಗಿದವು.
197 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ದೆಹಲಿ ವಾರಿಯರ್ಸ್ ತಂಡಕ್ಕೆ ಚಾಡ್‌ವಿಕ್ ವಾಲ್ಟನ್ ಅವರ ಶತಕ ಉದ್ಘಾಟನಾ ಪಂದ್ಯದಲ್ಲೇ ಸುಲಭ ಜಯಕ್ಕೆ ದಾರಿ ಮಾಡಿಕೊಟ್ಟಿತು. ದೆಹಲಿ ವಾರಿಯರ್ಸ್ 9 ವಿಕೆಟ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು.
ವಾಲ್ಟನ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಶ್ರೀವತ್ಸ ಗೋಸ್ವಾಮಿ ಅವರ ಸಮರ್ಥ ಬೆಂಬಲದಿಂದ ದೆಹಲಿ ತಂಡ 16.3 ಓವರ್‌ಗಳಲ್ಲಿ ಗುರಿ ತಲುಪಿತು. ಆರಂಭಿಕ ವಿಕೆಟ್‌ಗೆ ಈ ಜೋಡಿ 159 ರನ್‌ಗಳ ಭರ್ಜರಿ ಜೊತೆಯಾಟ ನೀಡಿತು. ಗೋಸ್ವಾಮಿ 56 ರನ್‌ಗಳಿಗೆ ಔಟಾದರೂ, ತಂಡದ ಗೆಲುವಿಗೆ ಭದ್ರ ನೆಲೆ ನಿರ್ಮಿಸಿದ್ದರು. ದುಬೈ ಪರ ಪಿಯೂಷ್ ಚಾವ್ಲಾ ಏಕೈಕ ವಿಕೆಟ್ ಪಡೆದರು.
ತಮ್ಮ ಇನಿಂಗ್ಸ್ ಕುರಿತು ಮಾತನಾಡಿದ ವಾಲ್ಟನ್, “ಗೋವಾದ ವಾತಾವರಣ ಅದ್ಭುತವಾಗಿದ್ದು, ಪ್ರೇಕ್ಷಕರು ನಮಗೆ ಭಾರೀ ಉತ್ಸಾಹ ನೀಡಿದರು” ಎಂದು ಹೇಳಿದರು.
ದೆಹಲಿ ವಾರಿಯರ್ಸ್ ನಾಯಕ ಹರ್ಭಜನ್ ಸಿಂಗ್ ಮಾತನಾಡಿ, “ಚಾಡ್‌ವಿಕ್ ಮತ್ತು ಶ್ರೀವತ್ಸ ಅದ್ಭುತವಾಗಿ ಆಟ ಆಡಿದರು. ಶಿಖರ್ ಅವರಂತಹ ಹಳೆಯ ಸಹ ಆಟಗಾರರೊಂದಿಗೆ ಮತ್ತೆ ಆಡುವುದು ವಿಶೇಷ ಅನುಭವ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೊದಲು ಬ್ಯಾಟಿಂಗ್‌ಗೆ ಇಳಿದ ದುಬೈ ರಾಯಲ್ಸ್ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ಕರ್ಕ್ ಎಡ್ವರ್ಡ್ಸ್ ಪವರ್‌ಪ್ಲೇನಲ್ಲಿ ಉತ್ತಮ ಲಯದಲ್ಲಿದ್ದರು. ಆದರೆ ದೆಹಲಿ ನಾಯಕ ಹರ್ಭಜನ್ ಸಿಂಗ್, ಧವನ್ ಅವರನ್ನು ಔಟ್ ಮಾಡುವ ಮೂಲಕ ತಂಡಕ್ಕೆ ಮಹತ್ವದ ಬ್ರೇಕ್ ನೀಡಿದರು.
ನಂತರ ಕರ್ಕ್ ಎಡ್ವರ್ಡ್ಸ್ ಮತ್ತು ಪೀಟರ್ ಟ್ರೆಗೋ 95 ರನ್‌ಗಳ ಜೊತೆಯಾಟ ನಡೆಸಿ ಇನ್ನಿಂಗ್ಸ್ ಅನ್ನು ಮರುನಿರ್ಮಿಸಿದರು. ದೆಹಲಿ ಪರ ಸುಬೋಧ್ ಭಾಟಿ 37 ರನ್ ನೀಡಿ 3 ವಿಕೆಟ್‌ಗಳನ್ನು ಪಡೆದ ಪ್ರಮುಖ ಬೌಲರ್ ಆಗಿ ಹೊರಹೊಮ್ಮಿದರು.
ಇಂದು ನಡೆಯಲಿರುವ ಪಂದ್ಯಗಳಲ್ಲಿ ಅಭಿಮಾನಿಗಳಿಗೆ ಡಬಲ್ ಮನರಂಜನೆ ಲಭ್ಯವಾಗಲಿದೆ. ಮಧ್ಯಾಹ್ನ ನಡೆಯುವ ಪಂದ್ಯದಲ್ಲಿ ಪುಣೆ ಪ್ಯಾಂಥರ್ಸ್ ಮತ್ತು ಗುರುಗ್ರಾಮ್ ಥಂಡರ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ನಂತರ ರಾಜಸ್ಥಾನ್ ಲಯನ್ಸ್ ತಂಡ ಮಹಾರಾಷ್ಟ್ರ ಟೈಕೂನ್ಸ್ ವಿರುದ್ಧ ಸೆಣಸಲಿದೆ. ಕ್ರಿಸ್ ಗೇಲ್, ಮಾರ್ಟಿನ್ ಗಪ್ಟಿಲ್, ಶೇನ್ ವಾಟ್ಸನ್, ಸುರೇಶ್ ರೈನಾ, ಜೆಪಿ ಡುಮಿನಿ, ಸ್ಟುವರ್ಟ್ ಬ್ರಾಡ್ ಸೇರಿದಂತೆ ಅನೇಕ ದಿಗ್ಗಜರು ಮೈದಾನದಲ್ಲಿ ಬೆಂಕಿ ಹಚ್ಚುವ ನಿರೀಕ್ಷೆಯಿದೆ.



