January14, 2026
Wednesday, January 14, 2026
spot_img

ನಾಳೆಯಿಂದ ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; 100ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರ!

ಹೊಸದಿಗಂತ ವರದಿ ಬೆಂಗಳೂರು:

ನಾಳೆಯಿಂದ ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್ ಆರಂಭವಾಗಲಿದೆ. ಐಕಾನಿಕ್ ಸ್ಪೋರ್ಟ್ಸ್ & ಇವೆಂಟ್ಸ್ ಪ್ರಸ್ತುತಪಡಿಸುವ, ಸ್ಪೈಸ್‌ಜೆಟ್‌ನಿಂದ ಪವರ್‌ಡ್ ಆಗಿರುವ ವರ್ಲ್ಡ್ ಟೆನಿಸ್ ಲೀಗ್ (WTL), ಭಾರತ ಸೇರಿದಂತೆ ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರವಾಗಲಿದೆ. ಡಿಸೆಂಬರ್ 17ರಿಂದ 20ರವರೆಗೆ ಬೆಂಗಳೂರಿನ ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆಯಲಿರುವ WTLನ ಮೊದಲ ಭಾರತ ಆವೃತ್ತಿಯನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ನೇರ ಪ್ರಸಾರ ಮಾಡಲಿದೆ.

ವರ್ಲ್ಡ್ ಟೆನಿಸ್ ಲೀಗ್ ಅಮೆರಿಕಾ, ಯುರೋಪ್, ಏಷ್ಯಾ, ಭಾರತೀಯ ಉಪಖಂಡ, ಮಿಡಲ್ ಈಸ್ಟ್ ಮತ್ತು ಉತ್ತರ ಆಫ್ರಿಕಾ (MENA), ಸಬ್-ಸಹಾರಾ ಆಫ್ರಿಕಾ, ರಷ್ಯಾ ಹಾಗೂ ವಿಶ್ವದ ಇತರೆ ಭಾಗಗಳಲ್ಲಿ ಜಾಗತಿಕವಾಗಿ ಪ್ರಸಾರವಾಗಲಿದೆ. ಟೆನಿಸ್ ಚಾನೆಲ್, ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್, ಬೋಲ್ಷೆ, ಫ್ಯಾನ್‌ಕೋಡ್, ಕ್ಯಾನಲ್+, ಸೂಪರ್‌ಟೆನಿಸ್ ಇಟಲಿ, ಆನ್‌ಟೈಮ್ ಸ್ಪೋರ್ಟ್ಸ್, ಸ್ಟಾರ್‌ಟೈಮ್ಸ್, ಸ್ಟೈಕ್ಸ್ ಸ್ಪೋರ್ಟ್ಸ್ ಸೇರಿದಂತೆ ಹಲವು ಪ್ರಸಾರಕರ ಮೂಲಕ ಈ ಲೀಗ್ ವಿಶ್ವದಾದ್ಯಂತ ಅಭಿಮಾನಿಗಳನ್ನು ತಲುಪಲಿದೆ.

ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ವರ್ಲ್ಡ್ ಟೆನಿಸ್ ಲೀಗ್ (WTL), ನಾಲ್ಕು ದಿನಗಳ ಕಾಲ ನಡೆಯಲಿದೆ. ಭಾರತದ ಮೊದಲ ಆವೃತ್ತಿಯಲ್ಲಿ ಗೇಮ್ ಚೇಂಜರ್ಸ್ ಫಾಲ್ಕನ್ಸ್, VB ರಿಯಾಲ್ಟಿ ಹಾಕ್ಸ್, ಆಸಿ ಮ್ಯಾವೆರಿಕ್ಸ್ ಕೈಟ್ಸ್ ಮತ್ತು AOS ಈಗಲ್ಸ್ ತಂಡಗಳು ಭಾಗವಹಿಸುತ್ತಿದ್ದು, ಪ್ರತಿ ತಂಡವೂ ಅಗ್ರ ಅಂತಾರಾಷ್ಟ್ರೀಯ ಹಾಗೂ ಭಾರತೀಯ ಟೆನಿಸ್ ಆಟಗಾರರನ್ನು ಒಳಗೊಂಡಿದೆ. ಡೇನಿಯಲ್ ಮೆಡ್ವೆಡೆವ್, ನಿಕ್ ಕಿರ್ಗಿಯೊಸ್, ಗೇಲ್ ಮಾನ್ಫಿಲ್ಸ್, ಡೆನಿಸ್ ಶಪೋವಾಲೊವ್ ಮತ್ತು ಎಲಿನಾ ಸ್ವಿಟೋಲಿನಾ ಅವರಂತಹ ವಿಶ್ವದ ಖ್ಯಾತ ಆಟಗಾರರು, ಜೊತೆಗೆ ಭಾರತದ ಶ್ರೇಷ್ಠ ಟೆನಿಸ್ ತಾರೆಗಳಾದ ರೋಹನ್ ಬೋಪಣ್ಣ, ಸುಮಿತ್ ನಾಗಲ್, ಯೂಕಿ ಭಾಂಬ್ರಿ, ಸಹಜ ಯಮಲಪಲ್ಲಿ ಹಾಗೂ ಇತರ ಉದಯೋನ್ಮುಖ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಕುರಿತು ಮಾತನಾಡಿದ ವರ್ಲ್ಡ್ ಟೆನಿಸ್ ಲೀಗ್‌ನ ಸಹ-ಸ್ಥಾಪಕಿ ಹೇಮಲಿ ಶರ್ಮಾ, “ಭಾರತದಲ್ಲಿ ನಡೆಯುತ್ತಿರುವ ನಮ್ಮ ಮೊದಲ ಆವೃತ್ತಿಗೆ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಫ್ಯಾನ್‌ಕೋಡ್ ಅವರನ್ನು ಅಧಿಕೃತ ಪ್ರಸಾರ ಹಾಗೂ ಡಿಜಿಟಲ್ ಸ್ಟ್ರೀಮಿಂಗ್ ಪಾಲುದಾರರಾಗಿ ಹೊಂದಿರುವುದು ನಮಗೆ ಸಂತೋಷ ತಂದಿದೆ. ವರ್ಲ್ಡ್ ಟೆನಿಸ್ ಲೀಗ್‌ನ ರೋಚಕ ಪಂದ್ಯಗಳು 100ಕ್ಕೂ ಹೆಚ್ಚು ದೇಶಗಳ ಅಭಿಮಾನಿಗಳಿಗೆ ತಲುಪಲಿವೆ” ಎಂದರು.

ಫ್ಯಾನ್‌ಕೋಡ್‌ನ ಸಹ-ಸ್ಥಾಪಕರಾದ ಪ್ರಸಾನ ಕೃಷ್ಣನ್ ಮಾತನಾಡಿ, “ವರ್ಲ್ಡ್ ಟೆನಿಸ್ ಲೀಗ್ ಅನ್ನು ಭಾರತೀಯ ಪ್ರೇಕ್ಷಕರಿಗೆ ತಲುಪಿಸಲು ನಾವು ಉತ್ಸುಕರಾಗಿದ್ದೇವೆ. ಈ ಆವೃತ್ತಿಯು ಮೆಡ್ವೆಡೆವ್, ಕಿರ್ಗಿಯೊಸ್, ಮಾನ್ಫಿಲ್ಸ್, ಬಡೋಸಾ, ಸ್ವಿಟೋಲಿನಾ ಅವರಂತಹ ಜಾಗತಿಕ ತಾರೆಗಳನ್ನು ಹತ್ತಿರದಿಂದ ವೀಕ್ಷಿಸುವ ಅಪೂರ್ವ ಅವಕಾಶವನ್ನು ಭಾರತೀಯ ಅಭಿಮಾನಿಗಳಿಗೆ ಒದಗಿಸುತ್ತದೆ ಎಂದರು.

Most Read

error: Content is protected !!