ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿರುವ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಇದೀಗ ತನ್ನ ನಾಲ್ಕನೇ ಸೀಸನ್‌ಗಾಗಿ ಸಜ್ಜಾಗಿದೆ. ಈ ಬಾರಿ ಮೆಗಾ ಹರಾಜು ನಡೆಯಲಿದ್ದು, ಅದರ ಮೊದಲು ಪ್ರತಿಯೊಂದು ಫ್ರಾಂಚೈಸಿಗೂ ಗರಿಷ್ಠ ಐವರು ಆಟಗಾರ್ತಿಯರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿದೆ. ನವೆಂಬರ್ 5ರೊಳಗೆ ರಿಟೈನ್ ಪಟ್ಟಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಉಳಿಸಿಕೊಳ್ಳಲಿರುವ ಆಟಗಾರ್ತಿಯರ ಪಟ್ಟಿ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಒಂದು ಫ್ರಾಂಚೈಸಿಗೆ ಗರಿಷ್ಠ ಐದು ಆಟಗಾರ್ತಿಯರನ್ನು ಉಳಿಸಿಕೊಳ್ಳಲು ಅವಕಾಶವಿದ್ದು, ಅವರ ಸಂಬಳ ಹಂತಗಳು ಹೀಗಿವೆ ಮೊದಲ ಆಟಗಾರ್ತಿಗೆ 3.50 ಕೋಟಿ, ಎರಡನೇ ಆಟಗಾರ್ತಿಗೆ 2.50 ಕೋಟಿ, ಮೂರನೇ ಆಟಗಾರ್ತಿಗೆ 1.75 ಕೋಟಿ, ನಾಲ್ಕನೇ ಆಟಗಾರ್ತಿಗೆ 1 ಕೋಟಿ ಹಾಗೂ ಐದನೇ ಆಟಗಾರ್ತಿಗೆ 50 ಲಕ್ಷ ರೂ. ಹೀಗೆ ಒಟ್ಟು 9.25 ಕೋಟಿ ರೂ. ವ್ಯಯಿಸಿ ಗರಿಷ್ಠ ಐವರನ್ನು ರಿಟೈನ್ ಮಾಡಬಹುದು.
ಆರ್‌ಸಿಬಿ ಈ ಬಾರಿ ಚಾಂಪಿಯನ್ ಪಟ್ಟವನ್ನು ಗುರಿಯಿಟ್ಟು ತನ್ನ ಅತ್ಯುತ್ತಮ ಆಟಗಾರ್ತಿಯರನ್ನು ಉಳಿಸಿಕೊಳ್ಳುವ ನಿರ್ಧಾರ ಕೈಗೊಂಡಿದೆ. ಅದರಲ್ಲಿ ಪ್ರಮುಖ ಐವರು ಇಂತಿದ್ದಾರೆ:
ಸ್ಮೃತಿ ಮಂಧಾನ (3.50 ಕೋಟಿ)
ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರನ್ನು ರಿಟೈನ್ ಮಾಡುವುದು ಖಚಿತ. 26 ಪಂದ್ಯಗಳಲ್ಲಿ 646 ರನ್ ಕಲೆಹಾಕಿರುವ ಅವರು 2024ರಲ್ಲಿ ಆರ್‌ಸಿಬಿಗೆ ಮೊದಲ ಕಪ್ ತಂದುಕೊಟ್ಟ ನಾಯಕಿಯಾಗಿದ್ದಾರೆ.
ಎಲ್ಲಿಸ್ ಪೆರ್ರಿ (2.50 ಕೋಟಿ)
ಆಸ್ಟ್ರೇಲಿಯನ್ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಆರ್‌ಸಿಬಿಯ ಎರಡನೇ ರಿಟೈನ್ ಆಟಗಾರ್ತಿ. 25 ಪಂದ್ಯಗಳಲ್ಲಿ 972 ರನ್ ಮತ್ತು 14 ವಿಕೆಟ್ ಪಡೆದಿದ್ದಾರೆ. ಆರ್‌ಸಿಬಿಯ ಚಾಂಪಿಯನ್ ಯಶಸ್ಸಿನಲ್ಲಿ ಪೆರ್ರಿಯ ಪಾತ್ರ ಅಮೂಲ್ಯ.
ರಿಚಾ ಘೋಷ್ (1.75 ಕೋಟಿ)
ಯುವ ವಿಕೆಟ್‌ಕೀಪರ್ ಬ್ಯಾಟರ್ ರಿಚಾ ಘೋಷ್ ತಮ್ಮ ಬಲಿಷ್ಠ ಬ್ಯಾಟಿಂಗ್‌ನಿಂದ ತಂಡಕ್ಕೆ ನಂಬಿಕೆಯ ಆಟಗಾರ್ತಿ ಆಗಿದ್ದಾರೆ. 26 ಪಂದ್ಯಗಳಲ್ಲಿ 625 ರನ್ ಗಳಿಸಿರುವ ಅವರು ಮುಂದಿನ ಸೀಸನ್‌ಗೂ ಆರ್‌ಸಿಬಿಯ ಪಾಲಾಗಲಿದ್ದಾರೆ.
ರೇಣುಕಾ ಸಿಂಗ್ ಠಾಕೂರ್ (1 ಕೋಟಿ)
ಆರ್‌ಸಿಬಿಯ ಪ್ರಮುಖ ವೇಗಿ ರೇಣುಕಾ ಠಾಕೂರ್ ಅವರನ್ನು ತಂಡ ಬಿಟ್ಟುಕೊಡುವ ಸಾಧ್ಯತೆ ಇಲ್ಲ. ಅವರ ವೇಗ ಮತ್ತು ಅಚ್ಚುಕಟ್ಟಾದ ಬೌಲಿಂಗ್ ಆರ್‌ಸಿಬಿಗೆ ಅತ್ಯಂತ ಅಗತ್ಯ.
ಶ್ರೇಯಾಂಕಾ ಪಾಟೀಲ್ (50 ಲಕ್ಷ)
ಕರ್ನಾಟಕದ ಯುವ ತಾರೆ ಶ್ರೇಯಾಂಕಾ ಪಾಟೀಲ್ 2024ರಲ್ಲಿ ಆರ್‌ಸಿಬಿಯ ಜಯದಲ್ಲಿ ಮಹತ್ವದ ಪಾತ್ರವಹಿಸಿದ್ದರು. ಅವರ ಆಲ್‌ರೌಂಡ್ ಪ್ರದರ್ಶನದ ಹಿನ್ನೆಲೆಯಲ್ಲಿ ಅವರನ್ನು ಮುಂದಿನ ಸೀಸನ್‌ಗೂ ರಿಟೈನ್ ಮಾಡಿಕೊಳ್ಳುವ ನಿರೀಕ್ಷೆ ಇದೆ.

