ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಕ್ರಿಕೆಟ್ ಲೋಕದ ಮತ್ತೊಂದು ರೋಚಕ ಹಂತಕ್ಕೆ ವೇದಿಕೆ ಸಜ್ಜಾಗಿದ್ದು, ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕೃತವಾಗಿ ಪ್ರಕಟಿಸಿದೆ. ಜನವರಿ 09ರಿಂದ ಫೆಬ್ರವರಿ 05ರವರೆಗೆ ನಡೆಯಲಿರುವ ಈ ಪ್ರತಿಷ್ಠಿತ ಟೂರ್ನಿ ನವಿ ಮುಂಬೈ ಹಾಗೂ ವಡೋದರಾ ನಗರಗಳಲ್ಲಿ ಆಯೋಜನೆಯಾಗಲಿದೆ.
ಟೂರ್ನಿಯ ಚೇರ್‌ಮನ್ ಜಯೇಶ್ ಜಾರ್ಜ್ ಅವರು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಹಿಳಾ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿದೆ. ಆರಂಭಿಕ ಹಂತದ ಪಂದ್ಯಗಳು ನವಿ ಮುಂಬೈನಲ್ಲಿ ನಡೆಯಲಿದ್ದು, ನಿರ್ಣಾಯಕ ಹೋರಾಟಗಳಿಗೆ ವಡೋದರಾ ಆತಿಥ್ಯ ವಹಿಸಲಿದೆ.
ಕಳೆದ ಆವೃತ್ತಿಯಲ್ಲಿ ಬೆಂಗಳೂರು, ಲಖನೌ, ಮುಂಬೈ ಹಾಗೂ ವಡೋದರಾ ಸೇರಿದಂತೆ ನಾಲ್ಕು ನಗರಗಳಲ್ಲಿ ಪಂದ್ಯಗಳು ನಡೆದಿದ್ದವು. ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ತಂಡವನ್ನು ಮಣಿಸಿ ಎರಡನೇ ಬಾರಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ನಾಯಕಿಯಾಗಿ ಹರ್ಮನ್‌ಪ್ರೀತ್ ಕೌರ್ ಅವರ ಪ್ರೇರಣಾದಾಯಕ ನಾಯಕತ್ವ ತಂಡಕ್ಕೆ ಕಿರೀಟ ತಂದುಕೊಟ್ಟಿತ್ತು.
ಇತ್ತೀಚೆಗಷ್ಟೇ ಭಾರತ ಮಹಿಳಾ ಏಕದಿನ ವಿಶ್ವಕಪ್ ಯಶಸ್ವಿಯಾಗಿ ಆಯೋಜಿಸಿ ಪ್ರಶಂಸೆ ಪಡೆದಿದ್ದರೆ, ಇದೀಗ ಮುಂದಿನ ವರ್ಷ ಪುರುಷರ ಐಸಿಸಿ ಟಿ20 ವಿಶ್ವಕಪ್‌ಗೂ ಆತಿಥ್ಯ ವಹಿಸಲು ಸಜ್ಜಾಗಿದೆ. ಇದರಿಂದ ಭಾರತ ಕ್ರಿಕೆಟ್ ಆಡಳಿತದಲ್ಲಿ ಮತ್ತೊಮ್ಮೆ ಜಾಗತಿಕ ಗಮನ ಸೆಳೆಯುತ್ತಿದೆ.

