ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಜೈಂಟ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ಆರ್‌ಸಿಬಿ, ಈ ಆವೃತ್ತಿಯಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಿ ಇತಿಹಾಸ ನಿರ್ಮಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಪವರ್‌ಪ್ಲೇನಲ್ಲೇ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡರೂ, ರಾಧಾ ಯಾದವ್ ಮತ್ತು ರಿಚಾ ಘೋಷ್ ತಂಡವನ್ನು ಕಾಪಾಡಿದರು. ಐದನೇ ವಿಕೆಟ್‌ಗೆ ಈ ಜೋಡಿ ಆಕ್ರಮಣ ಆಟವಾಡಿ ಭಾರೀ ಪಾಲುದಾರಿಕೆ ಕಟ್ಟಿತು. ರಾಧಾ ಯಾದವ್ 47 ಎಸೆತಗಳಲ್ಲಿ 66 ರನ್‌ಗಳ ಚೊಚ್ಚಲ ಅರ್ಧಶತಕ ಸಿಡಿಸಿದರೆ, ರಿಚಾ ಘೋಷ್ 28 ಎಸೆತಗಳಲ್ಲಿ 44 ರನ್‌ಗಳ ವೇಗದ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 182 ರನ್‌ಗಳನ್ನು ಕಲೆಹಾಕಿತು.
183 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ಜೈಂಟ್ಸ್ ಆರಂಭದಲ್ಲಿ ಹೋರಾಟ ನೀಡಿದರೂ, ಶ್ರೇಯಾಂಕಾ ಪಾಟೀಲ್ ಅವರ ಮಾರಕ ಬೌಲಿಂಗ್ ಎದುರು ಕುಸಿದಿತು. ಶ್ರೇಯಾಂಕಾ 3.5 ಓವರ್‌ಗಳಲ್ಲಿ 23 ರನ್ ನೀಡಿ 5 ವಿಕೆಟ್‌ಗಳನ್ನು ಕಬಳಿಸಿದರು. ಲಾರೆನ್ ಬೆಲ್ ಮೂರು ವಿಕೆಟ್ ಪಡೆದು ಬೆಂಬಲ ನೀಡಿದರು. ಪರಿಣಾಮವಾಗಿ ಗುಜರಾತ್ ತಂಡ 150 ರನ್‌ಗಳಿಗೆ ಆಲೌಟ್ ಆಯಿತು.
ಈ ಗೆಲುವಿನೊಂದಿಗೆ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.


