ಹೊಸದಿಗಂತ ಡಿಜಿಟಲ್ ಡೆಸ್ಕ್:
ಅದ್ಭುತ ಪ್ರಕೃತಿ ಸೌಂದರ್ಯ, ಶ್ರೀಮಂತ ಸಂಸ್ಕೃತಿ ಮತ್ತು ಬಜೆಟ್ ಸ್ನೇಹಿ ಪ್ರವಾಸಕ್ಕೆ ಹೆಸರುವಾಸಿಯಾದ ಥೈಲ್ಯಾಂಡ್, ವಿಶ್ವದ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಅದರಲ್ಲೂ ಭಾರತೀಯರಿಗೆ ಇದು ಅತ್ಯಂತ ಪ್ರಿಯವಾದ ವಿದೇಶಿ ತಾಣಗಳಲ್ಲಿ ಒಂದು. ಆದರೆ ಇನ್ನು ಮುಂದೆ ‘ಸ್ವರ್ಗ’ದಂತಿರುವ ಈ ದೇಶದ ಪ್ರವಾಸ ಕೊಂಚ ದುಬಾರಿಯಾಗಲಿದೆ.
ಥೈಲ್ಯಾಂಡ್ ಸರ್ಕಾರವು ತನ್ನ ದೇಶಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ವಿದೇಶಿ ಪ್ರವಾಸಿಗರ ಮೇಲೆ 300 ಬಹ್ತ್ (ಸರಿಸುಮಾರು 820 ರೂ.) ಮೊತ್ತದ ಏಕರೂಪದ ‘ಪ್ರವಾಸೋದ್ಯಮ ತೆರಿಗೆ’ಯನ್ನು ವಿಧಿಸಲು ನಿರ್ಧರಿಸಿದೆ.
ತೆರಿಗೆ ಏಕೆ?
ಥೈಲ್ಯಾಂಡ್ ಪ್ರವಾಸೋದ್ಯಮ ಸೌಲಭ್ಯಗಳನ್ನು ಸುಧಾರಿಸಲು ಮತ್ತು ವಿದೇಶಿ ಪ್ರವಾಸಿಗರಿಗೆ ತುರ್ತು ಸಂದರ್ಭದಲ್ಲಿ ವಿಮೆಯನ್ನು ಒದಗಿಸಲು ಈ ತೆರಿಗೆಯನ್ನು ಬಳಸಲಾಗುತ್ತದೆ ಎಂದು ಅಲ್ಲಿನ ನೂತನ ಸಚಿವ ಅತ್ತಕೋರ್ನ್ ಸಿರಿಲತ್ತಾಯಕೋರ್ನ್ ತಿಳಿಸಿದ್ದಾರೆ.
ಯಾವಾಗಿಂದ ಜಾರಿ?
ವರದಿಗಳ ಪ್ರಕಾರ, ಈ ಹೊಸ ನಿಯಮವನ್ನು ಮುಂದಿನ ನಾಲ್ಕು ತಿಂಗಳೊಳಗೆ ಪರಿಚಯಿಸುವ ಸಾಧ್ಯತೆ ಇದೆ. ಅಂದರೆ, 2026ರ ಮೊದಲಾರ್ಧದ ವೇಳೆಗೆ ಈ ಯೋಜನೆ ಜಾರಿಗೆ ಬರುವ ನಿರೀಕ್ಷೆ ಇದೆ. ಒಮ್ಮೆ ಜಾರಿಯಾದ ಬಳಿಕ ಥೈಲ್ಯಾಂಡ್ ಪ್ರವಾಸಕ್ಕೆ ತೆರಳುವ ಪ್ರತಿಯೊಬ್ಬರೂ ಈ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಈ ಹಿಂದೆ ವಿಮಾನದ ಮೂಲಕ ಬರುವವರಿಗೆ 300 ಬಹ್ತ್ ಮತ್ತು ಭೂಮಿ/ಸಮುದ್ರ ಮಾರ್ಗದ ಮೂಲಕ ಬರುವವರಿಗೆ 150 ಬಹ್ತ್ ವಿಧಿಸಲು ನಿರ್ಧರಿಸಲಾಗಿತ್ತು. ಆದರೆ, ಪ್ರಸ್ತುತ ಎಲ್ಲರಿಗೂ ಸಮಾನವಾಗಿ 300 ಬಹ್ತ್ ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ.
ಭಾರತೀಯರ ಮೇಲೇನು ಪರಿಣಾಮ?
ಭಾರತವು ಥೈಲ್ಯಾಂಡ್‌ಗೆ ಪ್ರವಾಸಿಗರನ್ನು ಕಳುಹಿಸುವ ಮೂರನೇ ಅತಿದೊಡ್ಡ ರಾಷ್ಟ್ರವಾಗಿದೆ. 2024ರಲ್ಲಿ ಬರೋಬ್ಬರಿ 2.1 ಮಿಲಿಯನ್ ಭಾರತೀಯರು ಥೈಲ್ಯಾಂಡ್‌ಗೆ ಭೇಟಿ ನೀಡಿದ್ದಾರೆ.
ಹೆಚ್ಚಿನ ಹೊರೆ: ಈ ತೆರಿಗೆ ಜಾರಿ ಬಳಿಕ ಪ್ರತಿಯೊಬ್ಬ ಭಾರತೀಯ ಪ್ರವಾಸಿಗನು ಸರಿಸುಮಾರು 800-900 ರೂ. ಹೆಚ್ಚು ಪಾವತಿಸಬೇಕಾಗುತ್ತದೆ.
ಬಜೆಟ್ ಪ್ರವಾಸಿಗರಿಗೆ ಹೊರೆ: ಈ ಮೊತ್ತ ಹೆಚ್ಚೇನಲ್ಲವಾದರೂ, ಬಜೆಟ್ ಫ್ರೆಂಡ್ಲಿ ಪ್ರವಾಸಕ್ಕೆ ಆದ್ಯತೆ ನೀಡುವವರಿಗೆ, ಅದರಲ್ಲೂ ಕುಟುಂಬ ಸಮೇತ ಪ್ರಯಾಣಿಸುವವರಿಗೆ ಇದು ಕೊಂಚ ಹೊರೆಯಾಗಬಹುದು. ಇದು ಥೈಲ್ಯಾಂಡ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾಗುವ ಸಾಧ್ಯತೆಯಿದೆ.
ಸೌಲಭ್ಯ ಸುಧಾರಣೆ ನಿರೀಕ್ಷೆ: ಒಂದು ವೇಳೆ ಈ ತೆರಿಗೆಯನ್ನು ಸರ್ಕಾರ ಸರಿಯಾಗಿ ಬಳಸಿಕೊಂಡು ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಮತ್ತು ಸುರಕ್ಷತೆಯನ್ನು ಒದಗಿಸಿದ್ದೇ ಆದಲ್ಲಿ, ಥೈಲ್ಯಾಂಡ್‌ಗೆ ಪ್ರವಾಸಿಗರ ಭೇಟಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಈ ತೆರಿಗೆಯ ಪ್ರಸ್ತಾಪವು ಮೊದಲ ಬಾರಿಗೆ 2020ರಲ್ಲಿ ಬಂದಿತ್ತು ಮತ್ತು 2023ರಲ್ಲಿ ಅನುಮೋದನೆಯೂ ದೊರಕಿತ್ತು. ಈಗ ಇದು ಅಂತಿಮವಾಗಿ ಜಾರಿಗೆ ಬರುವ ಹಂತದಲ್ಲಿದೆ.